ಬೆಂಗಳೂರು : ದಿಡೀರ್ ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ತರಕಾರಿಗಳ ಬೆಲೆಗಳು ಗಗಕ್ಕೇರುವ ಸಂದರ್ಭ ಎದುರಾಗಿದೆ.ಹೀಗಾಗಿ ದಿನದಿಂದ ದಿನಕ್ಕೆ ಏರುತ್ತಿರುವ ತರಕಾರಿ ಬೆಲೆಗಳು ಜನಸಾಮಾನ್ಯರನ್ನು ಹೈರಾಣಾಗಿಸಿವೆ.
ಈಗಾಗಲೇ ಇಂಧನ ಮತ್ತು ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ, ಈಗ ತರಕಾರಿ ದರಗಳೂ ಏರಿಕೆಯಾಗಿರುವುದರಿಂದ ಜನ ಮತ್ತಷ್ಟು ತತ್ತರಿಸಿಹೋಗಿದ್ದಾರೆ.
ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಬಹುತೇಕ ತರಕಾರಿಗಳ ಬೆಲೆ ಶೇ. 40 ರಿಂದ 50 ರಷ್ಟು ಏರಿಕೆಯಾಗಿದೆ. ವಿಶೇಷವಾಗಿ ಬೀನ್ಸ್ ದರ ಕೆಲವು ಮಾರುಕಟ್ಟೆಗಳಲ್ಲಿ ಕೆ.ಜಿ.ಗೆ 200 ರೂಪಾಯಿಗಳ ಗಡಿ ದಾಟಿದ್ದರೆ, ನೂರು ರೂಪಾಯಿಗೂ ಕಡಿಮೆ ಇದ್ದ ಬೀಟ್‌ರೂಟ್, ಮೂಲಂಗಿ ಬೆಲೆಗಳೂ ಈಗ ನೂರರ ಹತ್ತಿರ ತಲುಪಿವೆ. ಈ ಹಿಂದೆ ಅಗ್ಗವಾಗಿದ್ದ ಟೊಮೆಟೊ ಕೂಡ ಈಗ ಕೆ.ಜಿ.ಗೆ 50-60 ರೂಪಾಯಿ ಆಸುಪಾಸಿನಲ್ಲಿದೆ.
ಕಳೆದ ಕೆಲವು ವಾರಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ ಮತ್ತು ತೀವ್ರಗೊಂಡ ಬಿಸಿಲಿನ ತಾಪದಿಂದಾಗಿ ಬೆಳೆ ಹಾನಿಯಾಗಿದೆ. ನೀರಾವರಿ ಸಮಸ್ಯೆಯಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ ಭಾಗಗಳಿಂದ ಮಾರುಕಟ್ಟೆಗೆ ಬರುತ್ತಿದ್ದ ಪೂರೈಕೆಯಲ್ಲಿ ಭಾರಿ ಕುಸಿತ ಕಂಡಿದೆ. ಹೀಗಾಗಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದೆ ದರಗಳು ಗಗನಕ್ಕೇರಿವೆ.
ಮಾರುಕಟ್ಟೆಯಲ್ಲಿನ ಈ ದಿಢೀರ್ ಏರಿಕೆಯಿಂದಾಗಿ ಹೋಟೆಲ್ ಉದ್ಯಮ ಹಾಗೂ ಸಾಮಾನ್ಯ ಗೃಹಿಣಿಯರ ಮಾಸಿಕ ಬಜೆಟ್ ಸಂಪೂರ್ಣ ಏರುಪೇರಾಗಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.



