ತುಮಕೂರು: ಯಡಿಯೂರಪ್ಪ ಕಾಲ್ಗುಣದಿಂದ ಮಳೆ ಬಂದಿದೆ ಎಂದು ಬರ ವೀಕ್ಷಣೆ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ರೈತರು ಹಾಡಿಹೊಗಳಿದ್ದಾರೆ.
ಮಧುಗಿರಿ ತಾಲ್ಲೂಕಿನ ಕೊಡ್ಲಾಪುರ ಗ್ರಾಮದ ಬರ ವೀಕ್ಷಣೆ ವೇಳೆ ಘಟನೆ ನಡೆದಿದ್ದು, ವೆಂಕರಮಣಪ್ಪ, ತಿಮ್ಮಪ್ಪ ಎಂಬುವವರ ಜಮೀನು ವೀಕ್ಷಣೆ ವೇಳೆ ರೈತರು ಹೊಗಳಿದ್ದಾರೆ.
ನಿಮ್ಮ ಕಾಲ ದೆಸೆಯಿಂದ ನಿನ್ನೆಯಿಂದ ಮಳೆ ಬಂದಿದೆ. ನೀವು ಬರ್ತೀರಾ ಅನ್ನೋ ಸುದ್ದಿ ಹಬ್ಬುತ್ತಿದ್ದಂತೆ ಮಳೆ ಬಂತು. ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಮಳೆ ಬಂದಿದ್ದು. ದಯಮಾಡಿ ಕ್ಷೇತ್ರವೆಲ್ಲಾ ಓಡಾಡಿ ಮಳೆ ಬರುತ್ತೆ ಎಂದು ರೈತರು ಹೇಳಿದ್ದಾರೆ.
ಈ ವೇಳೆ ರೈತರು ಯಡಿಯೂರಪ್ಪ ಅವರಿಗೆ ಜೈಕಾರ ಹಾಕಿದ್ದಾರೆ. ಮಳೆಯಿಲ್ಲದೆ ಶೇಂಗಾ ಒಣಗಿ ಹೋಗಿದೆ ಎಂದು ರೈತರು ತಿಳಿಸಿದ್ದು, ಈ ವೇಳೆ ರೈತರು ತಂದ ಶೇಂಗಾ ಗಿಡವನ್ನು ಕೈಯಲ್ಲಿ ಹಿಡಿದು ಯಡಿಯೂರಪ್ಪ ಅವರು ಪರಿಶೀಲನೆ ಮಾಡಿದರು.