ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು ತುಂತುರು ಮಳೆ ಶುರುವಾಗಿದೆ. ಬೆಂಗಳೂರಿನಲ್ಲಿ ಇಂದು ಕನಿಷ್ಠ 6 ಸೆಮಿವರೆಗೂ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಹಲವಡೆ ಟ್ರಾಫಿಕ್ ಜಾಮ್ ಆಗಿದ್ದು, ನಿಧಾನಗತಿಯ ಸಂಚಾರಕ್ಕೆ ಸೂಚಿಸಲಾಗಿದೆ.
ಬೆಂಗಳೂರು: ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ನಗರವಾಸಿಗಳಿಗೆ ಮಂಗಳವಾರ (ಜೂ.20) ಬೆಳಿಗ್ಗೆ ಮಳೆರಾಯ (Rain) ತಂಪೆರೆದಿದ್ದಾನೆ. ವಾತಾವರಣ ಕೂಲ್ ಕೂಲ್ ಆಗಿದ್ದು ಸಿಲಿಕಾನ್ ಸಿಟಿ (Bengaluru) ಜನರು ಫುಲ್ ಎಂಜಾಯ್ ಮೂಡ್ನಲ್ಲಿದ್ದಾರೆ. ಆದರೆ ಮಳೆಯಿಂದ ನಗರದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ. ಕಾರ್ಪೋರೇಷನ್, ಮಜೆಸ್ಟಿಕ್ (Majestic), ಹೆಬ್ಬಾಳ, ಶಾಂತಿನಗರ, ವಿಲ್ಸನ್‌ಗಾರ್ಡನ್ ಸೇರಿದಂತೆ ಹಲವಡೆ ಧಾರಾಕಾರ ಮಳೆ ಹಿನ್ನೆಲೆ ಭಾರಿ ಟ್ರಾಫಿಕ್ ಜಾಮ್ ಆಗಿದೆ. ನೂರಾರು ವಾಹನಗಳು ಜಾಮ್‌ನಲ್ಲಿ ಸಿಲುಕಿದ್ದು, ಗಂಟೆಗಟ್ಟಲೆ ವಾಹನಗಳು ಟ್ರಾಫಿಕ್‌ನಲ್ಲಿ ನಿಂತಿದ್ದವು.
ಮೆಜೆಸ್ಟಿಕ್, ಶಾಂತಿನಗರ, ಕಾರ್ಪೊರೇಷನ್ ಸರ್ಕಲ್, ಶಿವಾಜಿನಗರ, ಮೈಸೂರು ರಸ್ತೆ, ಕೆ.ಆರ್.ಮಾರುಕಟ್ಟೆ, ಮಾಗಡಿ ರಸ್ತೆ, ವಿಜಯನಗರ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ಔಟರ್ ರಿಂಗ್ ರೋಡ್ (ORR) ಬಿಇಎಲ್ ವೃತ್ತದಿಂದ ಕುವೆಂಪು ವೃತ್ತದಿಂದ ಹೆಬ್ಬಾಳ ಫ್ಲೈಓವರ್‌ವರೆಗೆ ರಸ್ತೆ ಜಲಾವೃತವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಅನಿಲ್ ಕುಂಬ್ಳೆ ವೃತ್ತ ಮತ್ತು ರಾಣಿ ಪ್ರತಿಮೆ ಬಳಿಯೂ ಜಲಾವೃತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಿ ಮೆರಿಡಿಯನ್ ಅಂಡರ್‌ಪಾಸ್ ಮಳೆ ನೀರಿನಿಂದ ತುಂಬಿಕೊಂಡಿದೆ. ಭಾರಿ ಮಳೆಯಿಂದಾಗಿ ಇಕೋಸ್ಪೇಸ್ ಮತ್ತು ಬೆಳ್ಳಂದೂರು ರಿಂಗ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಸುರಕ್ಷಿತವಾಗಿ ವಾಹನ ಚಾಲನೆ ಮಾಡುವಂತೆ ಎಂದು ಬಿಟಿಪಿ ಟ್ವೀಟ್ ಮಾಡಿದೆ. ಜಲಾವೃತದಿಂದಾಗಿ ಹೆಬ್ಬಾಳ ಫ್ಲೈಓವರ್‌ನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.
ಮಳೆರಾಯನ ಆರ್ಭಟ ಜೋರದ ಹಿನ್ನೆಲೆ ಬೆಂಗಳೂರಿಗರು ರಸ್ತೆಗಳಲ್ಲಿ ಸುರಕ್ಷಿತವಾಗಿ ಮತ್ತು ನಿಧಾನವಾಗಿ ಸಂಚರಿಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ. ವೈಟ್‌ಫೀಲ್ಡ್ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಧಾನಗತಿಯ ಸಂಚಾರ ದಟ್ಟಣೆ ಕಂಡುಬಂದಿದೆ. “ದಯವಿಟ್ಟು ರಸ್ತೆಗಳಲ್ಲಿ ಎಚ್ಚರಿಕೆಯಿಂದ ಮತ್ತು ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ. ದಯಮಾಡಿ ಸಹಕರಿಸಿ. ಇದು ನಿಮ್ಮ ಸುರಕ್ಷತೆಯ ವಿಷಯ! ಎಂದು ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.