ಯಳಂದೂರು: ರೈತರು ತಮ್ಮ ಕೃಷಿಯ ಜೊತೆ ಹೈನುಗಾರಿಕೆ ಹಾಗೂ ಕುರಿ,ಕೋಳಿ ಸಾಕಾಣಿಕೆಯಂತಹ ಉಪ ಕಸುಬುಗಳನ್ನು ಮಾಡುವುದರಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.
ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ೫ ಎಕರೆ ಒಳಪಟ್ಟ ಜಮೀನು ಹೊಂದಿರುವ ರೈತರಿಗೆ ೨೦೨೨-೨೩ ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಯೋಜನೆಯಡಿಯಲ್ಲಿ ಕುರಿ ಮರಿಗಳನ್ನು ನೀಡಲಾಗುತ್ತಿದೆ. ಒಬ್ಬ ಫಲಾನುಭವಿಗೆ ೩ ಕುರಿಗಳನ್ನು ನೀಡಲಾಗುತ್ತದೆ. ಇದಕ್ಕೆ ಒಟ್ಟು ೧೬ ಸಾವಿರ ರೂ. ಹಣವಾಗುತ್ತದೆ. ಇದರಲ್ಲಿ ಫಲಾನುಭವಿ ೮ ಸಾವಿರ ರೂ. ಹಣ ಹಾಕಬೇಕು ಉಳಿಕೆ ಹಣವು ಸಬ್ಸಿಡಿ ರೂಪದಲ್ಲಿ ಕೃಷಿ ಇಲಾಖೆಯಿಂದ ನೀಡಲಾಗುತ್ತದೆ. ಇದನ್ನು ಪಡೆದುಕೊಂಡ ರೈತರು ಮಾರಿಕೊಳ್ಳದೆ ಇದನ್ನು ಸಾಕಬೇಕು.
ಇದನ್ನು ಚೆನ್ನಾಗಿ ಸಾಕಿದರೆ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು. ಇಂದು ಹೈನುಗಾರಿಕೆ, ಕುರಿ, ಕೋಳಿ, ಹಂದಿ ಸಾಕಾಣಿಕೆ ರೈತರ ಉಪಕಸುಬಾಗಿದೆ. ಕೆಲವರು ಇದನ್ನೇ ಪ್ರಮುಖ ಕಾಯಕವಾಗಿ ಮಾಡಿಕೊಂಡು ಲಕ್ಷಾಂತರ ರೂ. ಆದಾಯಗಳಿಸುತ್ತಾರೆ. ಹಾಗಾಗಿ ಕೃಷಿಯೊಂದಿಗೆ ಇದಕ್ಕೂ ಹೆಚ್ಚು ಆದ್ಯತೆ ನೀಡಿದರೆ ತಮ್ಮನ್ನು ಆರ್ಥಿಕವಾಗಿ ಬಲವಾಗಿಸಿಕೊಳ್ಳಬಹುದು. ತಾಲೂಕಿನಲ್ಲಿ ಪ್ರಸ್ತುತ ೯೦ ಮಂದಿ ರೈತರು ಈ ಯೋಜನೆಗೆ ಆಯ್ಕೆಯಾಗಿದ್ದು ಒಬ್ಬರಿಗೆ ತಲಾ ಮೂರರಂತೆ ಒಟ್ಟು ೨೭೦ ಕುರಿಮರಿಗಳನ್ನು ನೀಡಲಾಗುತ್ತಿದ್ದು ಎಲ್ಲರೂ ಇದರ ಸುದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ತಹಶೀಲ್ದಾರ್ ಜಯಪ್ರಕಾಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮೃತೇಶ್ವರ್, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಪಪಂ ಸದಸ್ಯರಾದ ಮಹೇಶ್, ರಂಗನಾಥ್, ಮಂಜು, ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮಲ್ಲು, ಪಶು ವೈಧ್ಯ ಡಾ. ಶಿವರಾಜು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯರಿಯೂರು ಪ್ರಕಾಶ್ ಸೇರಿದಂತೆ ಅನೇಕರು ಇದ್ದರು.