ಜೈಪುರ: ಲೋಕಸಭೆ ಚುನಾವಣೆಗೆ ಮುನ್ನ ರಾಜಸ್ಥಾನದಲ್ಲಿ ರೂ. ೮೦೦ ಕೋಟಿಗೂ ಹೆಚ್ಚು ನಗದು, ಮದ್ಯ, ಬೆಲೆಬಾಳುವ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ವಿವಿಧ ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿವೆ. ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಅಕ್ರಮವಾಗಿ ಮತದಾರರಿಗೆ ಹಂಚಲು ಸಂಗ್ರಹಿಸಲಾಗಿದ್ದ ವಸ್ತುಗಳ ಜಪ್ತಿಯಲ್ಲಿ ರಾಜಸ್ಥಾನವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.
ಮಾರ್ಚ್ ೧ರಿಂದ ಇಲ್ಲಿಯವರೆಗೆ ದಾಖಲೆಯ ೮೧೨.೭೭ ಕೋಟಿ ರೂ. ಸಂಗ್ರಹಿಸಲಾಗಿದೆ. ಇದರಲ್ಲಿ ೩೬.೭೯ ಕೋಟಿ ರೂಪಾಯಿ ನಗದು, ೪೧.೭೧ ಕೋಟಿ ರೂಪಾಯಿ ಮೌಲ್ಯದ ಮದ್ಯ, ೧೨೧.೭೯ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್, ೪೯.೨೧ ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ೫೬೩ ಕೋಟಿ ರೂ. ಗೂ ಹೆಚ್ಚು ಮೌಲ್ಯದ ಉಚಿತ ಕೊಡುಗೆಗಳು ಸೇರಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ಹೇಳಿದ್ದಾರೆ. ರಾಜ್ಯದ ೨೦ ಜಿಲ್ಲೆಗಳಲ್ಲಿ ತಲಾ ೨೦ ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಲೋಕಸಭೆ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಮಾರ್ಚ್ ೧೬ ರಿಂದ ವಶಪಡಿಸಿಕೊಂಡ ಸರಕು ಮತ್ತು ನಗದು ಮೌಲ್ಯ ೭೧೨ ಕೋಟಿ ರೂ.ಗೂ ಹೆಚ್ಚಿದೆ ಎಂದು ಗುಪ್ತಾ ಹೇಳಿದ್ದಾರೆ.