ಮೈಸೂರು : ಹೆಸರಾಂತ ರಂಗಭೂಮಿ ಕಲಾವಿದ, ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ಹಾಗೂ ಶಿಲ್ಪಕಲೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರು ೨೦೨೪ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಸಂತಸದ ತಂದಿದೆ. ಅದರಲ್ಲೂ ಸಂವಿಧಾನ, ಜಾತ್ಯಾತೀತತೆ ಹಾಗೂ ಸಮಸಮಾಜದ ಬಗ್ಗೆ ಒಲವಿರುವ ಸರಕಾರ ನನ್ನನ್ನು ಪ್ರಶಸ್ತಿ ಆಯ್ಕೆ ಮಾಡಿರುವುದು ಖುಷಿಯಾಗಿದೆ. ಇದು ಸಮಸ್ತ ರಂಗಭೂಮಿಯ ಕ್ರಿಯಾಶೀಲರಿಗೆ ಸಂದ ಗೌರವ ಎಂದು ಜನಾರ್ಧನ್ ಅಭಿಪ್ರಾಯಪಟ್ಟರು.
ಯಾವುದೇ ಕ್ಷೇತ್ರವಿರಲಿ ಸುದೀರ್ಘವಾಗಿ ಪ್ರಾಮಾಣಿಕತೆ, ಬದ್ಧತೆ ಹಾಗೂ ಸೃಜನಶೀಲತೆಯಿಂದ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಒಳ್ಳೆಯ ಸಂಸ್ಕೃತಿ. ಈ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ನಾನು ಬಾಜನವಾಗಿರುವುದಕ್ಕೆ ಸಂತಸವಾಗಿದೆ.
ಈ ಪ್ರಶಸ್ತಿ ನನ್ನ ಗುರುಗಳಾದ ಬಿ.ವಿ ಕಾರಂತರು ಮತ್ತು ಡಾ.ಸಿದ್ದಲಿಂಗಯ್ಯ ಅವರಿಗೆ ಅರ್ಪಿಸುತ್ತೇನೆ. ನಾನು ಪ್ರಶಸ್ತಿಗಾಗಿ ಎಂದೂ ನಿರೀಕ್ಷೆ ಮಾಡಿದವನಲ್ಲ. ತಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಮಾಡಿಕೊಂಡು ಬಂದರೆ ಪ್ರಶಸ್ತಿಗಳು ತಾವಾಗಿಯೇ ಅರಸಿ ಬರುತ್ತವೆ. ಈ ಸಂದರ್ಭದಲ್ಲಿ ನಾನು ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು.
ಪ್ರಶಸ್ತಿ ತಡವಾಯಿತು ಅಂತ ಏನೂ ಅನ್ನಿಸುತ್ತಿಲ್ಲ. ನನಗಿಂತ ಅನೇಕ ಹಿರಿಯ ಸಾಧಕರು ಇದ್ದಾರೆ. ಆದಾಗ್ಯೂ ನನ್ನ ಐದು ದಶಕಗಳ ರಂಗ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ರಾಜ್ಯ ಸರಕಾರಕ್ಕೆ ಧನ್ಯವಾದಗಳು ಎಂದು ಜನ್ನಿ ಹೇಳಿದ್ದಾರೆ.