ಮೈಸೂರು: ರಾಮಮಂದಿರ ನಿರ್ಮಾಣವಾದರೆ ಸಾಲದು, ರಾಮರಾಜ್ಯ ನಿರ್ಮಾಣವಾಗಬೇಕು. ಪ್ರತಿಯೊಬ್ಬರೂ ತಮ್ಮ ಕಾರ್ಯಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಸರಸ್ವತಿಪುರಂನ ಉಡುಪಿ ಕೃಷ್ಣಧಾಮದಲ್ಲಿ ಚಾತುರ್ಮಾಸ ವ್ರತ ಆಚರಣೆಯಲ್ಲಿರುವ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿ, ರಾಮನ ಗುಣಗಳಲ್ಲಿ ಎಲ್ಲರೂ ಒಂದೊಂದು ಗುಣ ಅಳವಡಿಸಿಕೊಂಡರೆ ರಾಮರಾಜ್ಯ ಕಲ್ಪನೆ ನನಸಾಗಲಿದೆ. ರಾಮಭಕ್ತಿ ಬೇರೆ ಅಲ್ಲ. ದೇಶಭಕ್ತಿ ಬೇರೆ ಅಲ್ಲ. ರಾಮ ಸೇವೆ, ದೇಶ ಸೇವೆ ಎರಡೂ ಒಂದೆ. ಸಮಾಜದಲ್ಲಿ ಇರುವ ಅಸಹಾಯಕರಿಗೆ, ಬಡವರಿಗೆ, ಕಷ್ಟದಲ್ಲಿ ಇರುವವರಿಗೆ ಅವರವರ ವೃತ್ತಿ ಸೀಮೆಯಲ್ಲಿ ನೆರವಾಗುವುದೇ ರಾಮ ಸೇವೆ. ನಮ್ಮಲ್ಲಿ ಸಾಕಷ್ಟು ಸಂಘ ಸಂಸ್ಥೆಗಳಿವೆ. ಇವು ವರ್ಷಕ್ಕೆ ಒಂದಾದರು ಸಮಾಜ ಸೇವೆ ಮಾಡಿದರೆ ಎಷ್ಟೋ ಸಮಸ್ಯೆಗಳು ನಿವಾರಣೆ ಆಗಲಿವೆ ಎಂದರು.
ಮಠದಿಂದ ವಸತಿ ರಹಿತರಿಗೆ ಮನೆ ನೀಡಲು ಮುಂದಾಗಿದ್ದು, ಈಗಾಗಲೇ ಉಡುಪಿಯಲ್ಲಿ ಎಂಟು ಮನೆ ನಿರ್ಮಾಣ ಮಾಡಲಾಗಿದೆ. ಮೈಸೂರಿನಲ್ಲೂ ಇಬ್ಬರು ಮುಂದೆ ಬಂದಿದ್ದಾರೆ. ನಮ್ಮ ಸಾಧ್ಯತೆಗೆ ಅನುಗುಣವಾಗಿ ನೆರವು ನೀಡಲಾಗುವುದು ಎಂದರು.
ಹಿಂಸೆಯ ವೈಭವೀಕರಣ: ಇಂದು ಸಮಾಜದಲ್ಲಿ ಅನೇಕ ಬಗೆಯ ಗೊಂದಲಗಳು ಸೃಷ್ಟಿಯಾಗಿವೆ. ಹಿಂಸೆಯ ವೈಭವೀಕರಣವಾಗುತ್ತಿದೆ. ವಿದೇಶಗಳಲ್ಲಿ ಅಪರಾಧ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ. ಕಾನೂನಿನ ಮೇಲೆ ಭಯವೇ ಇಲ್ಲವಾಗಿದೆ. ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ಜನರ ವಿಶ್ವಾಸ ಗಳಿಸಬೇಕು. ಪತ್ರಿಕಾ ರಂಗ ಸಮಾಜ ಕಟ್ಟುವ ಕೆಲಸ ಮಾಡಬೇಕು. ಕೇವಲ ಒಡೆಯುವ ಕೆಲಸ ಮಾಡದೆ ಸಾಮರಸ್ಯೆ ಗಟ್ಟಿಗೊಳಿಸುವ ವರದಿ ಮಾಡಬೇಕು. ಪ್ರಜೆಗಳು ನಾಲ್ಕೂ ರಂಗಗಳ ಮೇಲೆ ವಿಶ್ವಾಸ ಇಟ್ಟು ಮುನ್ನಡೆದಾಗ ಸಮಾಜ ಸುಲಲಿತವಾಗಿ ಸಾಗಲಿದೆ ಎಂದರು.
ಮಣಿಪುರದಲ್ಲಿ ಪರಿಸ್ಥಿತಿ ಕೈ ಮೀರಿದೆ: ಮಣಿಪುರ ಸೇರಿದಂತೆ ದೇಶದ ಹಲವೆಡೆ ಸಂಘರ್ಷ ಏರ್ಪಟ್ಟಿದೆ. ಮಣಿಪುರದಲ್ಲಿ ದಿನಕ್ಕೊಂದು ಘಟನೆ ನಡೆಯುತ್ತಿದ್ದು, ಪರಿಸ್ಥಿತಿ ಕೈ ಮೀರಿದೆ. ಇದರಿಂದ ಅಲ್ಲಿನ ಸಮಸ್ಯೆ ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಶಾಂತಿ ಸಾಮರಸ್ಯ ಮರುಸ್ಥಾಪಿಸಲು ನಮ್ಮಿಂದ ಆಗುವ ಕಾರ್ಯ ಮಾಡಲು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದರು.