ರಾಮನಗರ: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಹಾರೋಹಳ್ಳಿಯ ಬಿ.ಎಂ. ನಾಗರತ್ನ ಬಂಜಗೆರೆ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಸಮಿತಿ ಸದಸ್ಯರಾಗಿ ಸೌಭಾಗ್ಯ ಎಸ್, ಬಸವರಾಜ್ ಎ.ಎನ್, ಸುಚಿತ್ರ ಎಸ್.ಆರ್ ಹಾಗೂ ಡಾ. ಹನಿಯೂರು ಚಂದ್ರೇಗೌಡ ಅವರನ್ನು ನೇಮಕವಾಗಿದೆ. ಪದಾಧಿಕಾರಿಗಳ ಅವಧಿ ಮೂರು ವರ್ಷವಾಗಿದೆ.
ನಾಗರತ್ನ ಅವರು ಆಸರೆ ಗ್ರಾಮೀಣ ಮಹಿಳಾ ಸ್ವಯಂ ಸೇವಾಸಂಸ್ಥೆ ಹಾಗೂ ನಂದಗೋಕುಲ ವಿದ್ಯಾ ಕೇಂದ್ರದ ಸಂಸ್ಥಾಪಕರಾಗಿದ್ದಾರೆ. ಹೊಂಬಾಳೆ ಗ್ರಾಮೀಣ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 1991ರಿಂದ ಜಿಲ್ಲೆಯ ನೂರಕ್ಕೂ ಹೆಚ್ಚು ಗ್ರಾಮಗಳ ಮಹಿಳೆಯರ ಹಾಗೂ ಮಕ್ಕಳ ಸಬಲೀಕರಣ ಮತ್ತು ಸಕ್ಷೇಮ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
‘ಮಹಿಳೆಯರು ಮತ್ತು ಮಕ್ಕಳ ಸಬಲೀಕರಣದಲ್ಲಿ ನಾನು ತೊಡಗಿಸಿಕೊಂಡು ಮಾಡುತ್ತಾ ಬಂದಿರುವ ಕೆಲಸವನ್ನು ಗುರುತಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿರುವ ಇಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸುವೆ’ ಎಂದು ನಾಗರತ್ನ ತಿಳಿಸಿದ್ದಾರೆ.