ನವದೆಹಲಿ: ಹಿಂದೂ ಮಹಾಕಾವ್ಯ ರಾಮಾಯಣವನ್ನು ಆದಿಪುರುಷ ಚಿತ್ರದಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂಬ ವಿವಾದ ಬಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಈ ಹಿಂದೆ ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿದ್ದ ರಮಾನಂದ್ ಸಾಗರ್ ಅವರ ರಾಮಾಯಣ ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿದೆ.
ಅರುಣ್ ಗೋಯಲ್ ರಾಮನಾಗಿ, ದೀಪಿಕಾ ಚಿಕ್ಲಿಯಾ ಅವರ ಸೀತೆಯಾಗಿ, ಸುನಿಲ್ ಲಾಹಿತಿ ಲಕ್ಷ್ಮಣನಾಗಿ ಅಭಿನಯಿಸಿರುವ ರಾಮಾಯಣ ಬರುವ ಜು.3 ರಿಂದ ದೂರದರ್ಶನದಲ್ಲಿ ಮರು ಪ್ರಸಾರಗೊಳ್ಳಲಿದೆ ಎಂದು ಶೇಮರೂ ಸಂಸ್ಥೆ ಘೋಷಿಸಿದೆ. ಪೀಕ್ ಆವರ್‍ನಲ್ಲೇ ರಾಮಾಯಣ ಮರು ಪ್ರಸಾರವಾಗಲಿದ್ದು, ಈ ಹಿಂದೆ ಸೃಷ್ಟಿಸಿದ್ದ ಸಂಚಲನ ಮರುಸೃಷ್ಟಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಏತನ್ಮಧ್ಯೆ, ಅಲಹಾಬಾದ್ ಹೈಕೋರ್ಟ್ ಆದಿಪುರುಷ’ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಸಹ-ಲೇಖಕ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ನಿರ್ದೇಶಿಸಿದೆ. ಚಿತ್ರ ನಿಷೇಧಕ್ಕೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ಚಿತ್ರದಲ್ಲಿನ ಸಂಭಾಷಣೆಗಳ ಸ್ವರೂಪವು ದೊಡ್ಡ ಸಮಸ್ಯೆಯಾಗಿದೆ. ರಾಮಾಯಣವು ನಮಗೆ ಒಂದು ಮಾದರಿಯಾಗಿದೆ. ಜನರು ಮನೆಯಿಂದ ಹೊರಡುವ ಮೊದಲು ರಾಮಚರಿತಮಾನಸ್ ಅನ್ನು ಓದುತ್ತಾರೆ, ಚಲನಚಿತ್ರಗಳು ಕೆಲವು ವಿಷಯಗಳನ್ನು ಮುಟ್ಟಬಾರದು ಎಂದು ಪೀಠ ಹೇಳಿದೆ.
ಸೆನ್ಸಾರ್ ಮಂಡಳಿ, ಚಲನಚಿತ್ರ ಪ್ರಮಾಣೀಕರಣ ಪ್ರಾಕಾರ ತನ್ನ ಜವಾಬ್ದಾರಿಯನ್ನು ಪೂರೈಸಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಪ್ರತಿವಾದಿಗಳು ಹಕ್ಕು ನಿರಾಕರಣೆ ಸೇರಿಸಿದ್ದಾರೆ ಮತ್ತು ಚಲನಚಿತ್ರದಿಂದ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಆದರೆ ನ್ಯಾಯಾಲಯ ಅವರ ಮೇಲೆ ತೀವ್ರ ತರಾಟೆಗೆ ತೆಗೆದುಕೊಂಡಿತು.