Wednesday, April 2, 2025
Google search engine

Homeರಾಜ್ಯಈದ್ ನಮಾಜ್ ಮೂಲಕ ಮೈಸೂರಿನೆಲ್ಲೆಡೆ ಸಂಭ್ರಮದ ರಂಜಾನ್ ಆಚರಣೆ

ಈದ್ ನಮಾಜ್ ಮೂಲಕ ಮೈಸೂರಿನೆಲ್ಲೆಡೆ ಸಂಭ್ರಮದ ರಂಜಾನ್ ಆಚರಣೆ

ಮೈಸೂರು : ಹಸಿವು ಮತ್ತು ದಾನ ಧರ್ಮದ ಮಹತ್ವವನ್ನು ಸಾರುವ ಈದುಲ್ ಫಿತರ್ (ರಂಜಾನ್) ಹಬ್ಬವನ್ನು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುವ ಮೂಲಕ ಸಹಸ್ರಾರು ಮುಸ್ಲಿಂ ಬಾಂಧವರು ನಗರದ ನೂರಾರು ಮಸೀದಿಗಳು ಮತ್ತು ಈದ್ಗಾ ಮೈದಾನದಲ್ಲಿ ಆಚರಿಸಿದರು.

29 ದಿನಗಳ ಉಪವಾಸದ ನಂತರ ಭಾನುವಾರ ರಾತ್ರಿ ಚಂದ್ರದರ್ಶನವಾದ ಕಾರಣ ನಿಯಮದಂತೆ ಸೋಮವಾರ ಬೆಳಗ್ಗೆ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲು ಇಸ್ಲಾಂ ಧರ್ಮಗುರುಗಳು ನಿರ್ಧರಿಸಿದ್ದರು.

ಮೈಸೂರಿನ ತಿಲಕ್‍ನಗರ, ರಾಜೀವ್‍ನಗರ ಮತ್ತು ಗೌಸಿಯಾನಗರದ ಈದ್ಗಾ ಮೈದಾನಗಳು ಸೇರಿದಂತೆ ನೂರಾರು ಮಸೀದಿಗಳಲ್ಲೂ ಈದ್ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಗೌಸಿಯಾನಗರದ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಗ್ಗೆ 9.30ಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಶ್ರೀರಂಗಪಟ್ಟಣದ ಜಾಮೀಯಾ ಟೀಪು ಅರೆಬಿಕ್ ಮದ್ರಸಾ ಕಾಲೇಜಿನ ಪ್ರಾಂಶುಪಾಲರಾದ ಮುಫ್ತಿ ಸಜ್ಜಾದ್ ಹುಸೇನ್ ವಿಶೇಷ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.

ಪ್ರಾರ್ಥನೆ ವೇಳೆ ಅವರು ಜಗತ್ತಿನಲ್ಲಿ ಮತ್ತು ವಿಶೇಷವಾಗಿ ಭಾರತದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಸುಮಾರು 5 ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಗೌಸಿಯಾನಗರ ಈದ್ಗಾ ಮೈದಾನದಲ್ಲಿ ನಮಾಜ್ ಸಲ್ಲಿಸಿದರು. ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಹಲವರು ತೋಳಿಗೆ ಕಪ್ಪುಪಟ್ಟಿಕಟ್ಟಿಕೊಂಡು ನಮಾಜ್ ಮಾಡಿದರೆ ಮತ್ತೆ ಕೆಲವರು, ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಬಿತ್ತಿಚಿತ್ರಗಳನ್ನು ಹಿಡಿದು ಸಾಂಕೇತಿಕವಾಗಿ ತಮ್ಮ ಪ್ರತಿಭಟನೆ ದಾಖಲಿಸಿದರು.

ಈದ್ಗಾ ಮೈದಾನಕ್ಕೆ ಬಂದಿದ್ದ ಎಲ್ಲರಿಗೂ ತಂಪುಪಾನಿಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಜಮಾತ್ ರಝಾಯೇ ಮುಸ್ತಫಾ ಮದ್ರಸಾದ ನೂರಾರು ಸ್ವಯಂ ಸೇವಕರು ನಮಾಜ್ ಸಂದರ್ಭದಲ್ಲಿ ಯಾವುದೇ ನೂಕು ನುಗ್ಗಲು ಗೊಂದಲ ಉಂಟಾಗದಂತೆ ಜಾಗ್ರತೆ ವಹಿಸಿದ್ದರು. ನಜರ್‍ಬಾದ್ ಠಾಣೆಯ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಾಗಿತ್ತು. ಮೈಸೂರು ಮಹಾನಗರಪಾಲಿಕೆಯಿಂದ ಶುಚಿತ್ವ ಕಾಪಾಡಲು ಪೌರಕಾರ್ಮಿಕರ ನಿಯೋಜನೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಕಮಾಲ್‍ಪಾಷ, ಜಮಾತೆ ರಝಾ ಮುಸ್ತಫಾ ಅಧ್ಯಕ್ಷರಾದ ಷರೀಫ್, ಕಾರ್ಯದರ್ಶಿ ರಫಿ ಅಹಮದ್ ಮುಂತಾದವರು ಇದ್ದರು.

RELATED ARTICLES
- Advertisment -
Google search engine

Most Popular