Monday, April 7, 2025
Google search engine

Homeಅಪರಾಧಕಾನೂನುಸೆಪ್ಟೆಂಬರ್ ೯ರಂದು ರಾಷ್ಟ್ರೀಯ ಲೋಕ ಅದಾಲತ್

ಸೆಪ್ಟೆಂಬರ್ ೯ರಂದು ರಾಷ್ಟ್ರೀಯ ಲೋಕ ಅದಾಲತ್

ರಾಮನಗರ: ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳನ್ನು 2023ರ ಸೆಪ್ಟೆಂಬರ್ 9ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಳಿಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಅಧ್ಯಕ್ಷರಾದ ನ್ಯಾ. ನಿಂಗಪ್ಪ ಪರಶುರಾಮ ಕೋಪರ್ಡೆ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ನಿರ್ದೇಶನದಂತೆ ರಾಮನಗರ ಜಿಲ್ಲೆಯಾದ್ಯಂತ ಒಟ್ಟು 20 ಬೆಂಚ್‌ಗಳಲ್ಲಿ ಸೆಪ್ಟೆಂಬರ್ 9 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.

ಜಿಲ್ಲೆಯಾದ್ಯಂತ ಏಕಕಾಲಕ್ಕೆ ಸೆಪ್ಟೆಂಬರ್ 9ರಂದು ನಡೆಯುವ ಲೋಕ ಅದಾಲತ್‌ಗಾಗಿ ಸೆಪ್ಟೆಂಬರ್ 8ರವರೆಗೆ ಪ್ರಕರಣಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ. ರಾಮನಗರ ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಕಲಾಪವು ನಡೆಯಲಿದೆ. ನ್ಯಾಯಾಲಯದ ಕಲಾಪಗಳಲ್ಲಿ ವಕೀಲರು ಭಾಗವಹಿಸಬಹುದು, ಅವಶ್ಯಕತೆ ಇದ್ದಲ್ಲಿ ಕಕ್ಷಿದಾರರನ್ನು ಆನ್‌ಲೈನ್ ಮೂಲಕ ಸಂಪರ್ಕಿಸಲಾಗುವುದು.

ಜಿಲ್ಲೆಯಲ್ಲಿ ಒಟ್ಟು 50635 ಪ್ರಕರಣಗಳು ಬಾಕಿ ಇದೆ. ಅವುಗಳ ಪೈಕಿ ರಾಜಿಯಾಗಬಹುದಾದ ಎಲ್ಲಾ ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಪ್ರಕರಣಗಳನ್ನಾಗಿ ಪರಿಗಣಿಸಿ ಕೈಗೆತ್ತಿಕೊಳ್ಳಲಾಗಿದೆ. ವಕೀಲರು ಖುದ್ದಾಗಿ ಹಾಗೂ ಆನ್‌ಲೈನ್ ಮೂಲಕ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಎಲ್ಲರಿಗೂ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ಲೋಕ ಅದಾಲತ್‌ಗೆ ಚಾಲನೆ ನೀಡಲಾಗಿದೆ.

ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು, ನೆಗೋಷಬಲ್ ಇನ್ಸ್ಟ್ರೂಮೆಂಟ್ ಕಾಯಿದೆ (ಎನ್‌ಐ ಆಕ್ಟ್) ಪ್ರಕರಣಗಳು, ಸಾಲ ವಸೂಲಾತಿ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪ್ರಕರಣ, ಕಾರ್ಮಿಕ ವಿವಾದ ಪ್ರಕರಣಗಳು, ಗಣಿ ಮತ್ತು ಭೂ ವಿಜ್ಞಾನ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ಆಸ್ತಿ ವಿಭಾಗ ಪ್ರಕರಣಗಳು, ನಿರ್ಧಿಷ್ಟ ಪ್ರಕರಣಗಳು, ಜಾರಿ ಪ್ರಕರಣಗಳು, ಹಕ್ಕು ಘೋಷಣೆ, ಶಾಶ್ವತ ನಿರ್ಭಂದಕಾಜ್ಞೆ ಹಾಗೂ ಇತರೆ, ಜನನ ಪ್ರಮಾಣ ಪತ್ರಕ್ಕೆ ಸಂಬoಧಿಸಿದ ಪ್ರಕರಣಗಳು, ಲಘು ವ್ಯಾಜ್ಯ ಪ್ರಕರಣಗಳು, ಇತರೆ ಕ್ರಿಮಿನಲ್ ಪ್ರಕರಣಗಳು, ಭೂಸ್ವಾಧೀನ ಜಾರಿ ಪ್ರಕರಣಗಳು, ಜೀವನಾಂಶ ಪ್ರಕರಣಗಳು, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಗೆ ಸಂಬoಧಿಸಿದ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.

ಆದ್ದರಿಂದ ಸಾರ್ವಜನಿಕರು ರಾಷ್ಟ್ರೀಯ ಲೋಕ ಅದಾಲತ್‌ನ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಅನಿತ ಎನ್.ಪಿ ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular