ಕೆ.ಆರ್.ನಗರ : ಸಾಲಿಗ್ರಾಮ ತಾಲ್ಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಸಪ್ತಮಾತೃಕೆ ದೇವಿರಮ್ಮ ತಾಯಿಯ ಸಿಡಿ ಉತ್ಸವ, ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ನಡುವೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ದೇವರ ವಿಗ್ರಹಕ್ಕೆ ವಿಶೇಷ ಅಲಂಕಾರದೊಂದಿಗೆ ಪೂಜಾ ಕೈಂಕರ್ಯಗಳನ್ನು ನಡೆಸಿ ಮಹಾಮಂಗಳಾರತಿಯನ್ನು ಮಾಡಲಾಯಿತು. ರಥವನ್ನು ವಿಶೇಷವಾಗಿ ಶೃಂಗರಿಸಿ ದೇವರ ಮೂರ್ತಿಯನ್ನು ಅಡ್ಡಪಲ್ಲಕಿಯಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ನಡೆಸಿ ನಂತರ ದೇವರ ಮೂರ್ತಿಯನ್ನು ರಥದಲ್ಲಿ ಕೂರಿಸಿ ಸಾವಿರಾರು ಭಕ್ತರ ಜಯಘೋಷಣೆಗಳೊಂದಿಗೆ ರಥೋತ್ಸವವನ್ನು ನಡೆಸಲಾಯಿತು.
ರಥೋತ್ಸವದಲ್ಲಿ ಮೈಸೂರು, ಬೆಂಗಳೂರು, ಹಾಸನ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ ಜಿಲ್ಲೆಗಳು ಸೇರಿದಂತೆ ನಾಡಿನ ಹಲವೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಸಾರ್ವಜನಿಕರು ರಥಕ್ಕೆ ಹಣ್ಣು ಜವನವನ್ನು ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳು ತಮ್ಮ ಕಲಾ ಪ್ರದರ್ಶನವನ್ನು ಮಾಡುವ ಮೂಲಕ ಭಕ್ತರ ಗಮನ ಸೆಳೆದಿದ್ದು ವಿಶೇಷವಾಗಿತ್ತು.
ದೇವಸ್ಥಾನಕ್ಕೆ ಹಾಗೂ ಸುತ್ತಮುತ್ತ ಇರುವ ದೇವಾಲಯಗಳಿಗೆ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಜಾತ್ರೆಯಲ್ಲಿ ಸಿಹಿತಿಂಡಿ, ಗೃಹ ಉಪಯೋಗಿ ವಸ್ತುಗಳು, ಆಟದ ಸಾಮಾನುಗಳು, ಹಣ್ಣುಕಾಯಿ, ಬಳೆ ಸೇರಿದಂತೆ ಹಲವು ಅಂಗಡಿಗಳನ್ನು ಹಾಕಲಾಗಿತ್ತು. ಈ ಸಂದರ್ಭದಲ್ಲಿ ದೂರದೂರಿನಿಂದ ಬಂದವರು, ಸ್ಥಳೀಯರು ಸೇರಿದಂತೆ ಹಲವರು ತಮ್ಮ ಮತ್ತು ತಮ್ಮ ಕುಟುಂಬದವರ ಮುಡಿಯನ್ನು ಮಾಡಿಸುವ ಮೂಲಕ ದೇವರಿಗೆ ಹರಕೆ ಸಲ್ಲಿಸಿದರು.
ರಥೋತ್ಸವದಲ್ಲಿ ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಜಿ.ಪಂ.ಮಾಜಿ ಸದಸ್ಯ ಅಮಿತ್ ವಿ.ದೇವರಹಟ್ಟಿ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್, ತಹಸೀಲ್ದಾರ್ ಕೆ.ಎನ್.ಮೋಹನ್ ಕುಮಾರ್, ತಾ.ಪಂ.ಮಾಜಿ ಅಧ್ಯಕ್ಷರಾದ ಹಾಡ್ಯಮಹದೇವಸ್ವಾಮಿ, ಹೆಚ್.ಟಿ.ಮಂಜಪ್ಪ, ಚಂದ್ರಶೇಖರ್, ಗ್ರಾ.ಪಂ. ಅಧ್ಯಕ್ಷೆ ರೇಣುಕಾವೆಂಕಟೇಶ್, ಮಾಜಿ ಅಧ್ಯಕ್ಷರಾದ ಲೋಕೇಶ್, ರಾಣಿಕುಮಾರ್, ಸದಸ್ಯ ಮಹದೇವಪ್ಪ, ಮುಖಂಡರುಗಳಾದ ದಿನೇಶ್ ನಂಜಪ್ಪ, ಎಸ್.ಪಿ.ಆನಂದ್, ದಿಲೀಪ್, ಧರ್ಮ, ಕುಮಾರ್, ಶಂಕರೇಗೌಡ, ಉದಯ್ ಶಂಕರ್, ಕಂಠಿಕುಮಾರ್, ನಾಗಣ್ಣ, ಕೋತ್ವಾಲ್ ಮಂಜುನಾಥ್, ಬಸವರಾಜು, ಮೈಕಲ್, ಮಂಜುನಾಥ್, ಲೋಕೇಶ, ಗಜೇಂದ್ರ, ಜನಪ್ರತಿನಿಧಿಗಳು, ವಿವಿಧ ಸಂಘಟನೆಯವರು, ತಾಲ್ಲೂಕು ಕಚೆ?ರಿ ಹಾಗೂ ನಾಡಕಚೇರಿಗಳ ನೌಕರರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಮುಂಜಾಗೃತ ಕ್ರಮವಾಗಿ ಸಾಲಿಗ್ರಾಮ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಿ.ಕೃಷ್ಣರಾಜು ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತು ಮಾಡಲಾಗಿತ್ತು.
