ಮೈಸೂರು: ಬಿಪಿಎಲ್ ಕಾರ್ಡ್ ಹೊಂದಿದ್ದು E-KYC ಮಾಡಿಸದವರಿಗೆ ಮೈಸೂರು ಜಿಲ್ಲಾಡಳಿತ ಡೆಡ್ ಲೈನ್ ನೀಡಿದ್ದು ಆಗಸ್ಟ್ 31ರೊಳಗೆ ಪಡಿತರ ಚೀಟಿದಾರರು E-KYC ಮಾಡಿಸಬೇಕೆಂದು ಸೂಚಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ಜಿಲ್ಲಾಡಳಿತ, ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ E-KYC (ಆಧಾರ್ ಆಧಾರಿತ ಹೆಬ್ಬೆಟ್ಟಿನ ದೃಢೀಕರಣ) ಮಾಡಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿರುತ್ತದೆ. ಆದ್ದರಿಂದ ಯಾರು ಕಳೆದ ಹಲವು ವರ್ಷಗಳಿಂದ ತಮ್ಮ ಬಿಪಿಎಲ್ ಪಡಿತರ ಚೀಟಿಗೆ ಈವರೆಗೆ E-KYC ಮಾಡಿಸಿರುವುದಿಲ್ಲವೋ ಅಂತಹವರು ಈ ಮಾಹೆಯ ದಿನಾಂಕ :31.08.2024 ರೊಳಗೆ ತಪ್ಪದೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ E-KYC ಮಾಡಿಸಲು ತಿಳಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ ಇ-ಕೆವೈಸಿ ಕಾರ್ಯ ಶೇ. 96.89 ಮುಕ್ತಾಯಗೊಂಡಿದ್ದು, EKY ಆಗದೇ ಇರುವವರ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ಪಟ್ಟಿಯನ್ನು ಪ್ರದರ್ಶಿಸಲಾಗಿರುತ್ತದೆ. ನಿಗದಿಪಡಿಸಿದ ದಿನಾಂಕದೊಳಗೆ E-KYC ಮಾಡಿಸದಿದ್ದಲ್ಲಿ E-KYC ಮಾಡಿಸದ ಸದಸ್ಯರನ್ನು ಅನರ್ಹರೆಂದು ಪರಿಗಣಿಸಿ ಅಂತಹವರ ಹೆಸರನ್ನು ಬಿ.ಪಿ.ಎಲ್ ಪಡಿತರ ಚೀಟಿಯಿಂದ ತೆಗೆದು ಹಾಕಲು ಕ್ರಮವಹಿಸಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.
E-KYC ಮಾಡಿಸುವುದು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಎಂದು ಪಡಿತರ ಚೀಟಿದಾರರ ಗಮನಕ್ಕೆ ಈ ಮೂಲಕ ತರಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ.
ಸರ್ಕಾರದ ಮಾನದಂಡಗಳನ್ವಯ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಇರುವುದು ಹಾಗೂ ಅನರ್ಹ ಪಡಿತರ ಚೀಟಿ ಪಡೆದಿರುವುದು ಕಾನೂನಿಗೆ ವಿರುದ್ಧ ವಾಗಿರುತ್ತದೆ. ಆದ್ದರಿಂದ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಪಡೆದುಕೊಂಡಿರುವುವವರು ಮತ್ತು ಆರ್ಥಿಕವಾಗಿ ಸಬಲರಾಗಿದ್ದು ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿರುವವರು ಕೂಡಲೇ ತಾಲ್ಲೂಕು ಕಚೇರಿ/ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ತಮ್ಮ ಪಡಿತರ ಚೀಟಿಯನ್ನು ಹಿಂದಿರುಗಿಸಲು ತಿಳಿಸಿದೆ.