ಬೆಂಗಳೂರು: ಹೊಸ ಪಡಿತರ ಚೀಟಿ ವಿತರಣೆಗೆ ಸರ್ಕಾರ ಯಾವಾಗ ಅನುಮತಿ ಕೊಡುತ್ತದೆ ಎಂಬ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಇನ್ನು ಈಗಾಗಲೇ ಬಿಪಿಎಲ್ ಕಾರ್ಡ್‌ಗೆ ಸಲ್ಲಿಕೆಯಾದ ಅರ್ಜಿಗಳು ವಿಲೇವಾರಿಯಾಗಿಲ್ಲ. ಇದರ ಮಧ್ಯೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್‌ಗಾಗಿ ಜನರು ಅಲೆದಾಡುತ್ತಿದ್ದಾರೆ. ಇದರ ಮಧ್ಯೆ ಬಿಪಿಎಲ್ ದಾರರಿಗೆ ಹೊಸ ಸಂಕಷ್ಟ ಎದುರಾಗಿದೆ. ಹೌದುಬಿಪಿಎಲ್ ಕಾರ್ಡ್‌ನಲ್ಲಿ ಪುರುಷರು ಮುಖ್ಯಸ್ಥರಾಗಿದ್ದರಿಂದ ಮಹಿಳೆಯರಿಗೆ ಸರ್ಕಾರ ನೀಡುತ್ತಿರುವ ೨೦೦೦ ರೂ. ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಿದ್ದಾರೆ. ಇದೀಗ ಸರ್ಕಾರ, ಮನೆ ಮುಖ್ಯಸ್ಥರ ಹೆಸರು ಬದಲಾವಣೆಗೆ ಇಂದಿನಿಂದ(ಸೆ. ೦೧) ಅವಕಾಶ ನೀಡಿದೆ.
ನಿಯಮದ ಪ್ರಕಾರ ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ವಯಸ್ಕ ಮಹಿಳೆ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ದೊರೆಯಲಿದೆ. ಆದ್ರೆ, ಆಹಾರ ಇಲಾಖೆಯ ಪ್ರಕಾರ ೬ ಲಕ್ಷಕ್ಕೂ ಹೆಚ್ಚು ಬಿಪಿಎಲ್ ಪುರುಷ ಮುಖ್ಯಸ್ಥ ಕಾರ್ಡ್ ದಾರರು ಇದ್ದಾರೆ. ವಯಸ್ಕ ಮಹಿಳೆ ಇದ್ದೂ ಪುರುಷ ಮುಖ್ಯಸ್ಥ ಇರುವ ಕಾರ್ಡ್ ನಿಂದ ಅರ್ಜಿ ಸಲ್ಲಿಸಲು ಬರಲ್ಲ. ಅಲ್ಲದೇ ಮನೆಯ ಮಹಿಳೆ ಇದ್ದರೂ ಗೃಹಲಕ್ಷ್ಮಿ ಎರಡು ಸಾವಿರ ದುಡ್ಡು ಸಿಗದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಮನೆಯೊಡತಿ ಹೆಸರು ಬದಲಾವಣೆಗೆ ಸೆ.೧ರಿಂದ ಸೆ,೧೦ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಹತ್ತು ದಿನದಲ್ಲಿ ಹೆಸರು ಬದಲಾವಣೆ ಮಾಡಿಸಿಕೊಳ್ಳಬೇಕು.
ರೇಷನ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರು ಸೇರಿಸುವುದು, ಯಾರಾದರೂ ಮೃತಪಟ್ಟರೆ ಅಂಥವರ ಹೆಸರು ಡಿಲೀಟ್, ಬೇರೆ ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಮಾಡಲು ಆಹಾರ ಇಲಾಖೆ ಅವಕಾಶ ಕೊಟ್ಟಿದೆ. ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಓನ್ ಹಾಗೂ ಕರ್ನಾಟಕ ಓನ್ ಸೇರಿ ಇತರ ಕಡೆಗಳಲ್ಲಿ ರೇಷನ್ ಕಾರ್ಡ್ ಮಾರ್ಪಾಡು, ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.