ನವದೆಹಲಿ: ಸತತ 10ನೇ ಬಾರಿ ಆರ್‌ಬಿಐ ನಿಲುವು ಅಚಲವಾಗಿದೆ. ಆರ್‌ಬಿಐ ಬಡ್ಡಿದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಇದರೊಂದಿಗೆ ರೆಪೋ ದರ ಅಥವಾ ಬಡ್ಡಿದರ ಶೇ. 6.50ರಲ್ಲಿ ಮುಂದುವರಿಯಲಿದೆ. ಸೋಮವಾರದಿಂದ ಮೂರು ದಿನಗಳ ಕಾಲ ನಡೆದ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸಭೆಯ ನಿರ್ಧಾರಗಳನ್ನು ಇಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರ್ಬಿಐನ ಆರು ಎಂಪಿಸಿ ಸದಸ್ಯರಲ್ಲಿ ಐವರು ಸದಸ್ಯರು ರೆಪೋ ದರ ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದರು ಎಂದು ಶಕ್ತಿಕಾಂತದಾಸ್ ಹೇಳಿದ್ದಾರೆ. ಎಂಎಸ್ಎಲ್ಆರ್ ಇತ್ಯಾದಿ ಇತರ ದರಗಳೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.
ರಿಪೋ ದರ ಎಂದರೆ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸಲಾಗುವ ಬಡ್ಡಿದರವಾಗಿದೆ. ರಿವರ್ಸ್ ರಿಪೋ ಎಂದರೆ ಆರ್ಬಿಐನಲ್ಲಿ ಬ್ಯಾಂಕುಗಳು ಇಡುವ ಠೇವಣಿಗೆ ಸಿಗುವ ಬಡ್ಡಿಯಾಗಿದೆ. ಆರ್ಬಿಐನ ಈ ದರಗಳು ಬ್ಯಾಂಕುಗಳ ಬಡ್ಡಿದರ ನೀತಿಗೆ ಪ್ರಭಾವ ಬೀರುತ್ತವೆ. ರಿಪೋ ದರಗಳು ಹೆಚ್ಚಾದರೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಬಡ್ಡಿದರ ಹೆಚ್ಚಿಸಬಹುದು. ಹೀಗಾಗಿ, ಆರ್ಬಿಐನ ರಿಪೋದರ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಪರಿಣಾಮ ಬೀರುತ್ತದೆ.