Sunday, April 20, 2025
Google search engine

Homeಸ್ಥಳೀಯಆರ್ ಬಿಐನ ಕನ್ನಡ ಕೈಂಕರ್ಯ ನಾಡು ಮೆಚ್ಚುವಂತಾದ್ದು : ಸಾಹಿತಿ ಬನ್ನೂರು ರಾಜು

ಆರ್ ಬಿಐನ ಕನ್ನಡ ಕೈಂಕರ್ಯ ನಾಡು ಮೆಚ್ಚುವಂತಾದ್ದು : ಸಾಹಿತಿ ಬನ್ನೂರು ರಾಜು

ಮೈಸೂರು: ಎಲ್ಲಾ ಜಾತಿ,ಮತ, ಧರ್ಮ, ಜನಾಂಗ, ವರ್ಗ ಸೇರಿದಂತೆ ಅನೇಕ ಭಾಷಿಕರನ್ನು ಒಳಗೊಂಡು ಅನೇಕತೆಯಲ್ಲಿ ಏಕತೆಯನ್ನು ಸಾಧಿಸುತ್ತಾ ಕನ್ನಡವನ್ನು ಕಟ್ಟುವ ಕೈಂಕರ್ಯವನ್ನು ಅಭಿಮಾನದಿಂದ ಮಾಡುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣಾಲಯ(ಆರ್ ಬಿಐ)ದ ಕನ್ನಡಾಭಿಮಾನ ನಾಡು ಮೆಚ್ಚುವಂತಾದ್ದೆಂದು ಸಾಹಿತಿ ಬನ್ನೂರು ಕೆ.ರಾಜು ಅವರು ಶ್ಲಾಘಿಸಿದರು.

ಮೈಸೂರಿನ ನೋಟು ಮುದ್ರಣ ನಗರದಲ್ಲಿರುವ ಪ್ರತಿಷ್ಠಿತ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣಾಲಯದ ಕನ್ನಡ ರಾಜ್ಯೋತ್ಸವ ಸಮಿತಿಯು ನೋಟು ಮುದ್ರಣಾಲಯದ ಸಮುದಾಯ ಭವನದ ಆವರಣದ ಸುಂದರ ಪರಿಸರದಲ್ಲಿ ಏರ್ಪಡಿಸಿದ್ದ ಐವತ್ತನೇ ಸುವರ್ಣ ಕರ್ನಾಟಕ ರಾಜ್ಯೋತ್ಸವ ಮತ್ತು ಅರವತ್ತೆಂಟನೇ ಕನ್ನಡ ರಾಜ್ಯೋತ್ಸವ ಸಮಾರಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಉದ್ಯೋಗಿಗಳ ತನಕ ಭಾರತದ ಬಹುತೇಕ ರಾಜ್ಯಗಳ ಜನರಿದ್ದು ಹಾಗೆಯೇ ಹಲವು ಭಾಷಿಕರಿದ್ದು ಇದೊಂದು ರೀತಿ ಮಿನಿ ಭಾರತವೇ ಆಗಿದ್ದು ನಮ್ಮ ರಾಷ್ಟ್ರಕವಿ ಕುವೆಂಪು ಹೇಳುವಂತೆ ಸರ್ವಜನಾಂಗದ ಶಾಂತಿಯ ತೋಟವಾಗಿದ್ದು ಇಲ್ಲಿ ಕನ್ನಡ ಬಾರದ ಕನ್ನಡೇತರರಿಗೆ ಶಿಕ್ಷಕಿ ಸವಿತಾ ಅವರ ಸಾರಥ್ಯದಲ್ಲಿ ಕನ್ನಡ ಕಲಿಸುವ ಕಾಯಕವೂ ನಡೆಯುತ್ತಿದೆಯೆಂದರು.

ಪ್ರತಿಯೊಬ್ಬರಿಗೂ ಭಾಷೆಯಷ್ಟೇ ಬದುಕು ದೊಡ್ಡದು. ಆದ್ದರಿಂದ ವರನಟ ಡಾ.ರಾಜ್ ಕುಮಾರ್ ಹಾಡಿರುವಂತೆ ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಅದು ಕನ್ನಡ ಮಾತ್ರ. ತಾಯಿ ಕರುಳಿನಿಂದ ಬಳುವಳಿಯಾಗಿ ಬಂದಿರುವ ಕನ್ನಡ ನುಡಿಯೆಂದರೆ ಅದೊಂದು ಮಹದದ್ಭುತ. ಅಂಥಾ ತಾಯ್ತನ ನಮ್ಮ ಮಾತೃ ಭಾಷೆ ಕನ್ನಡದಲ್ಲಿದೆ. ಹಾಗಾಗಿ ಜ್ಞಾನಕ್ಕಾಗಿ, ಅರಿವಿಗಾಗಿ, ಬದುಕಿಗಾಗಿ ಎಷ್ಟು ಭಾಷೆಗಳನ್ನು ಕಲಿತರೂ ಸರಿಯೆ ಆದರೆ ಮಾತೃ ಭಾಷೆ ಜೀವ ಮತ್ತು ಜೀವನವಾಗಬೇಕು. ಮಾತೃ ಭಾಷೆ ಎಂದರೆ ಅದು ನಮ್ಮ ವ್ಯಕ್ತಿತ್ವ ಹಾಗು ಅಸ್ತಿತ್ವ. ಪ್ರತಿಯೊಬ್ಬರಿಗೂ ಅವರವರ ಮಾತೃಭಾಷೆ ಅವರವರಿಗೆ ಮಹತ್ವದ್ದೇ ಆಗಿರುತ್ತದೆ. ಅದು ಯಾವುದೇ ಕ್ಷೇತ್ರವಿರಲಿ ಮಾತೃ ಭಾಷೆಯಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ. ವಿಶ್ವಮಾನವ ಕುವೆಂಪು ಸಹ ಜಾಗತಿಕವಾಗಿ ಮನ್ನಣೆಗಳಿಸಿದ್ದು ಮತ್ತು ವಿಶ್ವಕವಿಯಾದದ್ದು ಮಾತೃಭಾಷೆ ಕನ್ನಡದಲ್ಲಿ ಬರೆದಿದ್ದರಿಂದಲೇ. ಇಂತಹ ತಾಯ್ನುಡಿಯ ಶಕ್ತಿಯ ಬಗ್ಗೆ ಕುವೆಂಪು ಅವರಿಗೆ ಬಾಲಕರಾಗಿದ್ದಾಗಲೇ ತಿಳಿಸಿ ಕುವೆಂಪು ಅವರು ತಮ್ಮ ಸಾಹಿತ್ಯ ಕೃಷಿಯನ್ನು ಮಾತೃ ಭಾಷೆ ಕನ್ನಡದಲ್ಲೇ ಮಾಡಲು ಐರಿಷ್ ಕವಿ ಜೇಮ್ಸ್ ಕಸಿನ್ಸ್ ಪ್ರೇರಕಶಕ್ತಿ ಆಗಿದ್ದರೆಂಬುದನ್ನು ನಾವು ನೆನಸಿಕೊಳ್ಳಲೇಬೇಕು.

ಕನ್ನಡವೆಂದರೆ ಬರಿಭಾಷೆಯಲ್ಲ. ಅದೊಂದು ಸಂಸ್ಕೃತಿ. ಇದಕ್ಕೆ ಸಾವಿರಾರು ವರ್ಷಗಳ ಪ್ರಾಚೀನ ಇತಿಹಾಸವಿದೆ. ಇಂತಹ ಕನ್ನಡ ನುಡಿಗೆ, ಕನ್ನಡ ಸಂಸ್ಕೃತಿಗೆ ಜಗತ್ತನ್ನೇ ವಿಸ್ಮಯಗೊಳಿಸುವ ಶಕ್ತಿಯಿದೆ. ವಿನೋಬಾ ಭಾವೆಯವರಿಂದ ಲಿಪಿಗಳ ರಾಣಿ ಎಂದು ಕರೆಸಿಕೊಂಡಿರುವ ಕನ್ನಡತಿ ಸೌಹಾರ್ದತೆಯ ಗಣಿಯೂ ಹೌದು.ಹಾಗಾಗಿ ಕನ್ನಡೇತರರೂ ಕೂಡ ಕನ್ನಡಿಗರೊಡನೆ ಸೌಹಾರ್ದತೆಯಿಂದ ಕೂಡಿ ಬಾಳುವ ವಾತಾವರಣ ಕನ್ನಡಮ್ಮನ ನೆಲದಲ್ಲಿದೆಯೆಂದ ಬನ್ನೂರು ರಾಜು ಅವರು, ಪರಭಾಷಿಗರೂ ಸಹ ಕನ್ನಡ ಭಾಷೆಯ ಆಕರ್ಷಣೆಗೆ ಒಳಗಾಗಿ ಪ್ರೀತಿಯಿಂದ, ಅಭಿಮಾನದಿಂದ ಕನ್ನಡ ಭಾಷೆ ಕಲಿತು ತನ್ಮೂಲಕ ಅನೇಕ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಕರಾಗಿ ನೂರಾರು ವರ್ಷಗಳಿಂದ ಕನ್ನಡವನ್ನು ಕಟ್ಟಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು.

ಕನ್ನಡ ನಾಡಿನ ಏಕೀಕರಣ ಮತ್ತು ಕರ್ನಾಟಕವು ಹೆಸರಾದ ಬಗೆಯನ್ನು ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಕು.ರುಜುಲಾ ಭಾನುಪ್ರಕಾಶ್ ಮಾಹಿತಿ ಪೂರ್ಣವಾಗಿ ಅಷ್ಟೇ ಸ್ಪಷ್ಟವಾಗಿ, ಆಕರ್ಷಣೀಯವಾಗಿ ಮಾತನಾಡಿ, ಕನ್ನಡ ಮತ್ತು ಕರ್ನಾಟಕದ ಮೇಲೆ ಬೆಳಕು ಚೆಲ್ಲಿ ನೆರೆದಿದ್ದವರ ಮೆಚ್ಚುಗೆ ಗಳಿಸಿದ್ದು ಸಮಾರಂಭದ ವಿಶೇಷವಾಗಿತ್ತು.ಇದಕ್ಕೂ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣಾಲಯದ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಹರ್ಷಕುಮಾರ್ ಮನ್ರಾಲ್ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆಗೆ ಅದರದೇ ಆದ ವಿಶಿಷ್ಟ ಇತಿಹಾಸವಿದ್ದು ಜಾಗತಿಕವಾಗಿ ಮಹತ್ವಗಳಿಸಿದೆ ಎಂದು ಹೇಳಿದರು.

ಹಿರಿಯ ಅಧಿಕಾರಿಗಳಾದ ಜೋಗಾ ರೆಡ್ಡಿ, ರಜನಿಕಾಂತ್, ಎಸ್.ಎಂ.ಬ್ಯಾನರ್ಜಿ, ಪ್ರಭುಕುಮಾರ್ ಅವರುಗಳು ಕಾರ್ಯಕ್ರಮ ಕುರಿತು ಮಾತನಾಡಿದರು.ಅರ್ ಬಿ ಐ ನ ಉಪ ಪ್ರಧಾನ ವ್ಯವಸ್ಥಾಪಕರೂ ಆದ ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಎಲ್.ರವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಭಾನುಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಪ್ರಭು, ಕಾರ್ಯದರ್ಶಿ ತೋಟಪ್ಪ ಶೆಟ್ಟಿ, ಖಜಾಚಿ ಚೇತನ್, ಪಿ.ರಾಜಣ್ಣ, ಚಂದ್ರಶೇಖರ್, ಬಸವರಾಜು ಇನ್ನಿತರರಿದ್ದರು. ಇದೇ ವೇಳೆ ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರನ್ನು ವಿಶೇಷವಾಗಿ ಗೌರವಿಸಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ಭುವನೇಶ್ವರಿ ಪ್ರಾರ್ಥನೆ ಮಾಡಿದರೆ ರವಿಶಂಕರ್ ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಲಕ್ಷ್ಮೀನಾರಾಯಣ ವಂದಿಸಿದರು. ಈಶ್ವರಪ್ಪ ಕಡ್ಡಿಪುಡಿ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

RELATED ARTICLES
- Advertisment -
Google search engine

Most Popular