ಚಾಮರಾಜನಗರ: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಅವರ ಭಾವ ರಿಯಲ್ಟರ್ ಮಹದೇವಯ್ಯ ನಾಪತ್ತೆಯಾಗಿದ್ದರು. ಆದರೆ ಇಂದು ಅವರು ತಾಲ್ಲೂಕಿನ ರಾಮಾಪುರದ ದೊಡ್ಡಗುಂಡು ಮುನೇಶ್ವರ ದೇವಾಲಯ ಸಮೀಪ ಅರಣ್ಯದಲ್ಲಿ ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಬಳಿಯ ನಿರ್ಜನ ಪ್ರದೇಶದಲ್ಲಿ ಅವರ ರಕ್ತಸಿಕ್ತ ದೇಹ ಮೂಟೆಯೊಂದರಲ್ಲಿ ಪತ್ತೆಯಾಗಿದೆ.
ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹದೇವಯ್ಯ ಅವರು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಅವರ ಕಾರು ಭಾನುವಾರ ರಾತ್ರಿ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತದ ಕಲೆಗಳು ಕಂಡು ಬಂದಿತ್ತು.
ದುಷ್ಕರ್ಮಿಗಳು ಮಹದೇವಯ್ಯ ಅವರನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು.
ರಾಮಾಪುರದ ಸುತ್ತಮುತ್ತ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ರಾಮಾಪುರದಿಂದ ನಾಲ್‌ರೋಡ್ ಕಡೆಗೆ ಹೋಗುವ ರಸ್ತೆಯಲ್ಲಿ ಒಂದೂವರೆ ಕಿ.ಮೀ ದೂರದಲ್ಲಿ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ.
ದುಷ್ಕರ್ಮಿಗಳು, ಮಹದೇವಯ್ಯ ಅವರನ್ನು ಕೊಲೆ ಮಾಡಿ 50 ಅಡಿ ಎತ್ತರದಿಂದ ಕೆಳಕ್ಕೆ ಎಸೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಅವರ ಸೋದರ ಸಿ.ಪಿ.ರಾಜೇಶ್ ಭೇಟಿ ನೀಡಿದ್ದಾರೆ.
ಮೃತದೇಹ ಪತ್ತೆಯಾಗಿರುವುದನ್ನು ದೃಢಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು, ‘ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ. ರಾಮಾಪುರದಲ್ಲಿ ಕಾರು ಇರುವ ವಿಚಾರ ನಮಗೆ ಭಾನುವಾರ ಸಂಜೆ ಗೊತ್ತಾಯಿತು. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಶನಿವಾರ ಬೆಳಿಗ್ಗೆಯೇ ಕಾರು ಅಲ್ಲಿಗೆ ಬಂದಿದೆ. ರಾಮನಗರ ಜಿಲ್ಲೆಯ ಪೊಲೀಸರು ಕೂಡ ತನಿಖೆಗಾಗಿ ಬಂದಿದ್ದು, ನಾವು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ’ ಎಂದು ಹೇಳಿದರು.