ಚಾಮರಾಜನಗರ: ಹೆಚ್ಚಿನ ಲಾಭ ತರಲಿರುವ ವೈಜ್ಞಾನಿಕ ಕೃಷಿ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳಲು ಮುಂದಾಗಬೇಕಿದೆ ಎಂದು ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ಸಲಹೆ ಮಾಡಿದರು. ಗುಂಡ್ಲುಪೇಟೆ ತಾಲೂಕಿನ ಬೇಗೂರು ಉಪ ಮಾರುಕಟ್ಟೆ ಪ್ರಾಂಗಣದಲ್ಲಿಂದು ಹತ್ತಿ ಮಾರುಕಟ್ಟೆಗಾಗಿ ಮುಚ್ಚು ಹರಾಜು ಕಟ್ಟೆ, ಸಿಸಿ ರಸ್ತೆ, ಆಸ್ಪಾರ್ಟ್ ರಸ್ತೆ, ಸಿಸಿ ಚರಂಡಿ, ಆಡಳಿತ ಕಚೇರಿ, ಇನ್ನಿತರ ಅಭಿವೃದ್ದಿ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಕೃಷಿ ಪದ್ದತಿ ಅನುಸರಿಸಿದಾಗ ರೈತರಿಗೆ ಸಾಕಷ್ಟು ಸಹಾಯವಾಗಲಿದೆ. ಒಂದೇ ಬೆಳೆಗೆ ಅವಲಂಬಿತರಾಗದೇ ಮೂರರಿಂದ ನಾಲ್ಕು ಬೆಳೆಗಳನ್ನು ಬೆಳೆದಾಗ ಆದಾಯವು ಹೆಚ್ಚಲಿದೆ. ಪಾರಂಪಾರಿಕ ಕೃಷಿಗಿಂತ ಬದಲಾವಣೆಗಳನ್ನು ತರುವ ಕೃಷಿ ಪದ್ದತಿ ಅಳವಡಿಸಿಕೊಳ್ಳುವತ್ತ ರೈತರು ಒಲವು ತೋರಬೇಕು ಎಂದು ಸಚಿವರು ತಿಳಿಸಿದರು.
ರೈತರು ಬೆಳೆದ ಬೆಳೆಗೆ ಸ್ಥಿರವಾದ ಬೆಲೆ ಸಿಗಬೇಕು. ರೈತರ ಏಳಿಗೆಯ ದೂರದೃಷ್ಠಿ ಇಟ್ಟುಕೊಂಡು ರೈತರ ಕೃಷಿ ಉತ್ಪನ್ನಗಳಿಗೆ ಯೋಗ್ಯ ಧಾರಣೆ ಕೊಡಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ನೀರು, ವಿದ್ಯುತ್‍ಗಿಂತಲೂ ಸ್ಥಿರ ಧಾರಣೆಯಿಂದ ರೈತರಿಗೆ ದೊಡ್ಡ ಸಹಾಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ 170 ಎಪಿಎಂಸಿಗಳಿದ್ದು, ಇವುಗಳ ಅಭಿವೃದ್ದಿಗೆ ನೆರವು ನೀಡಲಿದ್ದೇವೆ. ನನ್ನ ಇಲಾಖೆಗೆ 390 ಕೋಟಿ ರೂ. ಅನುದಾನ ಬಂದಿದೆ. ಬೇಗೂರಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ದಿಗೆ 6 ಕೋಟಿ ರೂ. ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಹಣ ಅಗತ್ಯವಿದ್ದಲ್ಲಿ ನೀಡಲಾಗುವುದು. ಸುಸಜ್ಜಿತ ಮಾರುಕಟ್ಟೆ ಪ್ರಾಂಗಣ ಗುಣಮಟ್ಟದಿಂದ ಕಾಲಮಿತಿಯೊಳಗೆ ನಿರ್ಮಾಣವಾಗಬೇಕು ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಕಬ್ಬು ಬೆಳೆಗಾರರು, ರೈತ ಮುಖಂಡರು ಪ್ರಸ್ತಾಪಿಸಿರುವ ಮನವಿ ಬೇಡಿಕೆಗಳನ್ನು ಆಲಿಸಿದ್ದೇನೆ. ಇಲ್ಲಿನ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಯಿಂದ ನೀಡಬೇಕಿರುವ ಲಾಭಾಂಶ ಕೊಡಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಎಪಿಎಂಸಿಯಲ್ಲಿ ಹೆಚ್ಚಿನ ಕಮಿಷನ್ ವಸೂಲಿ ಮಾಡುವವರ ವಿರುದ್ದ ಕ್ರಮ ಜರುಗಿಸಲು ಸೂಚಿಸಲಾಗಿದ್ದು, ಈಗಾಗಲೇ ಕೆಲವರಿಗೆ ನೋಟಿಸ್ ನೀಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಕಮಿಷನ್ ವಸೂಲಿ ಮಾಡುವವರ ಲೈಸೆನ್ಸ್ ಅನ್ನು ಅಮಾನತು ಮಾಡಲು ಸೂಚಿಸಲಾಗಿದೆ. ಎಪಿಎಂಸಿಗಳ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಕೃಷಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬೇಗೂರು ಉಪ ಮಾರುಕಟ್ಟೆ ಅಭಿವೃದ್ದಿ ಕೆಲಸಗಳಿಗೆ ತ್ವರಿತವಾಗಿ ಅನುಮೋದನೆ ನೀಡಿದ್ದು, ಕಾಮಗಾರಿಗೆ ಚಾಲನೆ ದೊರೆತಿದೆ. ಎಪಿಎಂಸಿಗಳಲ್ಲಿ ಮೂಲ ಸೌಕರ್ಯ ಅಭಿವೃದ್ದಿಗೆ ಗಮನ ಸೆಳೆಯಲಾಗಿದೆ. ರಸ್ತೆ, ಕೋಲ್ಡ್ ಸ್ಟೋರೇಜ್ ಇನ್ನಿತರ ಉಪಯೋಗಿ ಕೆಲಸಗಳು ಆಗಬೇಕಿದೆ ಎಂದರು.
ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಕೆ.ಎಸ್. ಶಿವಪ್ರಕಾಶ್ (ರವಿ), ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಮ್ಮ, ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಾದ ಜಿ.ಎಂ. ಗಂಗಾಧರಸ್ವಾಮಿ, ಅಧೀಕ್ಷಕ ಅಭಿಯಂತರರಾದ ಸಿ.ಜಿ. ರಘುನಂದನ್, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರಾದ ಟಿ.ವಿ. ಪ್ರಕಾಶ್‍ಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷರಾದ ವೆಂಕಟನಾಯಕ, ಆರ್.ಎಸ್. ನಾಗರಾಜು, ಭಾಗ್ಯ, ಎಂ. ವಿರೂಪಾಕ್ಷ, ಹೆಚ್.ಬಿ. ನಾಗರಾಜು, ಅರಸ ಶೆಟ್ಟಿ, ಬಸವರಾಜಪ್ಪ, ಪಿ.ಮಹದೇವಪ್ಪ, ಎಂ.ಜಿ. ನಾಗರತ್ನ, ರಾಜು, ಎಸ್. ಮಹದೇವಪ್ಪ, ಎಸ್. ನಾಗಪ್ಪ, ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಎಸ್. ಶ್ರೀಧರ್, ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಎಸ್.ಎಸ್. ಖಾದರಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗೌರೀಶ್ ಹೆಚ್. ಗೌಡ, ಸಹಾಯಕ ಅಭಿಯಂತರರಾದ ಹಸೀಬ್ ಅಹಮದ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಸಚಿವರು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಮಿತಿಯ ಸದಸ್ಯರೊಂದಿಗೆ ಆಡಳಿತ ಕಚೇರಿಯಲ್ಲಿ ಚರ್ಚೆ ನಡೆಸಿದರು. ಪ್ರವಾಸಿ ಮಂದಿರದಲ್ಲಿ ಕಬ್ಬು ಬೆಳೆಗಾರರು, ರೈತ ಮುಖಂಡರೊಂದಿಗೆ ಚರ್ಚಿಸಿ ಮನವಿ ಅಹವಾಲುಗಳನ್ನು ಆಲಿಸಿದರು.