ಪಿರಿಯಾಪಟ್ಟಣ: ಕ್ರೀಡಾಕೂಟಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವುದು ಮುಖ್ಯ ಎಂದು ಬೆಟ್ಟದಪುರ ಕನ್ನಡ ಮಠದ ಚನ್ನವೀರ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಬೆಟ್ಟದಪುರದ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ಡಿಟಿಎಂಎನ್ ಶಾಲೆ ಸಹಯೋಗದಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದಾಗ ಸಾಧನೆಯ ಗುರಿ ತಲುಪಲು ಸಹಕಾರವಾಗುತ್ತದೆ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿರುವುದರಿಂದ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದರು.
ಡಿಟಿಎಮ್ಎನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಅವರು ಮಾತನಾಡಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರು ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಸ್ಪರ್ಧಾ ಮನೋಭಾವನೆಯಿಂದ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿದಾಗ ಸಾಧನೆಯ ಗುರಿ ತಲುಪಬಹುದು ಎಂದರು.
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಘುಪತಿ ಅವರು ಮಾತನಾಡಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು, ನಾಯಕತ್ವ ಗುಣ ಬೆಳೆಸಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಲಿವೆ ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿದ ಪಥಸಂಚಲನದಲ್ಲಿ ಸರ್ಕಾರಿ ಪ್ರೌಢಶಾಲೆ ಭುವನಹಳ್ಳಿ ವಿದ್ಯಾರ್ಥಿಗಳು ಪ್ರಥಮ, ಎಸ್ ಎಂಎಸ್ ಶಾಲೆ ವಿದ್ಯಾರ್ಥಿಗಳು ದ್ವಿತೀಯ, ಡಿಟಿಎಂಎನ್ ನವೋದಯ ಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು ವಿಜೇತ ಶಾಲಾ ವಿದ್ಯಾರ್ಥಿಗಳಿಗೆ ಬಿಇಓ ಬಸವರಾಜು ಬಹುಮಾನ ವಿತರಿಸಿದರು.
ಡಿಟಿಎಂಎನ್ ವಿದ್ಯಾ ಸಂಸ್ಥೆ ನಿರ್ದೇಶಕರಾದ ಗುರುದತ್ ಹಾಗೂ ರವಿಕುಮಾರ್ ಕ್ರೀಡಾಕೂಟ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಡಿಟಿಎಂಎನ್ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ನಟರಾಜ್, ನಿರ್ದೇಶಕ ವಿಜಯ್ ಕುಮಾರ್, ಪ್ರಾಂಶುಪಾಲ ಸತೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಮುರುಳಿ ಕೃಷ್ಣ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜರೀನಾ ಖಾನಮ್ ಹಾಗೂ ವಿವಿಧ ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
