ಬೆಂಗಳೂರು : ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ಸಂಸ್ಥೆಗೆ (ಕೆ.ಆರ್.ಐ.ಡಿ.ಎಲ್) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಗೊಂಡಿರುವ 74 ಮಂದಿ ಅಭಿಯಂತರರು ಹಾಗೂ ಸಹಾಯಕರಿಗೆ ಇಂದು ನಡೆದ ಸರಳ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರೂ ಆದ ಸಂಸ್ಥೆಯ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ನೇಮಕಾತಿ ಆದೇಶಗಳನ್ನು ವಿತರಿಸಿದರು.
ನೂತನವಾಗಿ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ಗ್ರಾಮೀಣ ಜನರ ಸೇವೆ ಮಾಡುವ ಅವಕಾಶಗಳಿದ್ದು ಅಭ್ಯರ್ಥಿಗಳು ಶ್ರದ್ಧೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಲು ಈ ಸಂದರ್ಭದಲ್ಲಿ ಸಚಿವರು ಕರೆ ನೀಡಿದರು. ಆಯ್ಕೆಗೊಂಡ ಅಭ್ಯರ್ಥಿಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸರ್ಕಾರದ ಅನುಮತಿಯಂತೆ ಸಂಸ್ಥೆಯ 16 ವಿವಿಧ ವೃಂದದ 76 ಹುದ್ದೆಗಳನ್ನು ಭರ್ತಿ ಮಾಡಲು ಸಂಸ್ಥೆ ಕ್ರಮ ಕೈಗೊಂಡಿತ್ತು. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿತ್ತು. ಪ್ರಾಧಿಕಾರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ 76 ಹುದ್ದೆಗಳ ಪೈಕಿ 02 ಹುದ್ದೆಗಳನ್ನು ಹೊರತುಪಡಿಸಿ, ಉಳಿದ ವಿವಿಧ ವೃಂದದ 74 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಂಸ್ಥೆಗೆ ನೀಡಿತ್ತು. ಆಯ್ಕೆಯಾಗಿರುವ 74 ಅಭ್ಯರ್ಥಿಗಳ ಪೈಕಿ 25 ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್), 13 ಕಿರಿಯ ಅಭಿಯಂತರರು (ಸಿವಿಲ್), 04 ಪ್ರಥಮ ದರ್ಜೆ ಸಹಾಯಕರು ಹಾಗೂ 03 ದ್ವಿತೀಯ ದರ್ಜೆ ಸಹಾಯಕರುಗಳಿಗೆ ನೇಮಕಾತಿ ಪತ್ರಗಳನ್ನು ಇಂದು ಸಚಿವರು ವಿತರಿಸಿದರು. ಕಾರ್ಯಕ್ರಮದಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಸವರಾಜು, ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.