Tuesday, July 7, 2026
Google search engine

Homeಅಪರಾಧಕಾನೂನುಆಸ್ತಿ ನೋಂದಣಿ ರದ್ದಾದರೆ ಶುಲ್ಕ ಮರುಪಾವತಿ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ಆಸ್ತಿ ನೋಂದಣಿ ರದ್ದಾದರೆ ಶುಲ್ಕ ಮರುಪಾವತಿ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಖರೀದಿ-ಮಾರಾಟ ವ್ಯವಹಾರ ರದ್ದಾದರೆ, ಮುಂಗಡವಾಗಿ ಪಾವತಿಸಿರುವ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕವನ್ನು ಮರುಪಾವತಿಸುವಂತೆ ಸಲ್ಲಿಸುವ ಅರ್ಜಿಯನ್ನು ಕೇವಲ ವಿಳಂಬದ ನೆಪದಲ್ಲಿ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಬೆಳಗಾವಿಯ ಗೋಪಾಲರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ, ಜಿಲ್ಲಾ ನೋಂದಣಾಧಿಕಾರಿಗಳ ತೀರ್ಮಾನವನ್ನು ಪ್ರಶ್ನಿಸಿ ಅರ್ಜಿದಾರರ ಮನವಿಯನ್ನು ಎಂಟು ವಾರಗಳೊಳಗೆ ಮರುಪರಿಶೀಲಿಸುವಂತೆ ನಿರ್ದೇಶಿಸಿದೆ.

ನ್ಯಾಯಾಲಯವು, ಕರ್ನಾಟಕ ಮುದ್ರಾಂಕ ಕಾಯ್ದೆ-1957ರ ಸೆಕ್ಷನ್ 52ಎ ಅಡಿಯಲ್ಲಿ ಶುಲ್ಕ ಮರುಪಾವತಿ ಕೋರುವುದಕ್ಕೆ ಯಾವುದೇ ನಿರ್ದಿಷ್ಟ ಕಾಲಮಿತಿ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಅಧಿಕಾರಿಗಳು ಯಾವುದೇ ಕಾನೂನು ಆಧಾರವಿಲ್ಲದೆ ಒಂದು ವರ್ಷದ ಕಾಲಮಿತಿ ಹೇರಿರುವುದು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಕರ್ನಾಟಕ ನೋಂದಣಿ ನಿಯಮಗಳು-1965ರ ನಿಯಮ 193ರ ಪ್ರಕಾರ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ದಾಖಲೆಗಳನ್ನು ಹಿಂಪಡೆಯುವ ಹಕ್ಕು ಅರ್ಜಿದಾರರಿಗೆ ಇದೆ ಎಂದು ತಿಳಿಸಿದೆ.

ವ್ಯವಹಾರವೇ ರದ್ದಾದ ಬಳಿಕ ಸರ್ಕಾರವು ಸಾರ್ವಜನಿಕರ ಹಣವನ್ನು ಉಳಿಸಿಕೊಳ್ಳಲು ಅವಕಾಶವಿಲ್ಲ. ನಿಯಮಾನುಸಾರ ನಕಲು ವೆಚ್ಚ ಹಾಗೂ ಅರ್ಧದಷ್ಟು ನೋಂದಣಿ ಶುಲ್ಕವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಹಿಂದಿರುಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದಲ್ಲಿ ಗೋಪಾಲರಾವ್ ಅವರು ಬೆಳಗಾವಿಯಲ್ಲಿ ನಿವೇಶನ ಖರೀದಿಸಲು 5.88 ಲಕ್ಷ ರೂ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪಾವತಿಸಿದ್ದರು. ಬಳಿಕ ಮಾರುಕಟ್ಟೆ ಮೌಲ್ಯ ಹೆಚ್ಚಳದಿಂದ ವ್ಯವಹಾರ ಲಾಭದಾಯಕವಲ್ಲವೆಂದು ಕಂಡು ಖರೀದಿಯಿಂದ ಹಿಂದೆ ಸರಿದಿದ್ದರು. ಹಣ ಮರುಪಾವತಿಗೆ ಸಲ್ಲಿಸಿದ್ದ ಅರ್ಜಿಯನ್ನು ಒಂದು ವರ್ಷದ ವಿಳಂಬದ ನೆಪದಲ್ಲಿ ಅಧಿಕಾರಿಗಳು ತಿರಸ್ಕರಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

RELATED ARTICLES
- Advertisment -
Google search engine

Most Popular