ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ತಾನು ನೀಡಿದ್ದ ಸಾಲ ಮರುಪಾವತಿ ಮಾಡಲು ನಿರಾಕರಣೆ ಮಾಡಿದ ಕಾರಣ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಮೂಡಲಬೀಡು ಗೇಟ್ ನಲ್ಲಿ ನಡೆದಿದೆ. ಮೂಡಲಬೀಡು ಗೇಟ್ ನ ಲೇ.ಕೃಷ್ಣೇಗೌಡ ಎಂಬುವರ ಪುತ್ರ ಮಂಜುನಾಥ್(29)ಮೃತ. ಈತ ಕಳ್ಳಿಮುದ್ದನಹಳ್ಳಿ ಗ್ರಾಮದ ಬಳಿ ಭಾನುವಾರ ಮುಂಜಾನೆ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗಾರೆ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಕೆಲ ತಿಂಗಳ ಹಿಂದೆ ತಾಲೂಕಿನ ಕಾಟ್ನಾಳು ಗ್ರಾಮದ ಕಾಂತ ಎಂಬುವರ ಪುತ್ರಿ ಮೇಘನಾ ಹಾಗು ಅಳಿಯ ತೇಜಸ್ ಅವರಿಗೆ ತಮ್ಮ ನಿವೇಶನ ಮಾರಿದ್ದ ಹಾಗು ಸಂಪಾದಿಸಿದ್ದ 18 ಲಕ್ಷ ರೂ ಹಣವನ್ನು ಸಾಲವಾಗಿ ನೀಡಿದ್ದ ಎನ್ನಲಾಗಿದ್ದು,ಒಂದು ಲಕ್ಷ ರೂ.ಗೆ ತಿಂಗಳಿಗೆ 10 ಸಾವಿರ ರೂ.ದುಬಾರಿ ಬಡ್ಡಿ ನೀಡುವುದಾಗಿ ನಂಬಿಸಿ ಈ ದಂಪತಿ ಮಂಜುವಿನ ಬಳಿ ಹಣ ಪಡೆದಿದ್ದರು.
ಆರಂಭದಲ್ಲಿ ಸ್ವಲ್ಪ ಬಡ್ಡಿ ಹಣ ನೀಡಿದ್ದ ಆರೋಪಿಗಳು ಕ್ರಮೇಣ ಬಡ್ಡಿ,ಅಸಲು ನೀಡಲು ನಿರಾಕರಣೆ ಮಾಡಿದ್ದರು.ಮೇಘನಾ ಹಾಗು ತೇಜಸ್ ಅವರಿಂದ ಮೋಸ ಹೋದ ನನ್ನ ಸಹೋದರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರಿ ಕೋಮಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮಂಜು ಸಾವಿಗೂ ಮುನ್ನ ಕಾಂತ ಅವರ ಅಳಿಯ ,ಮಗಳು 18 ಲಕ್ಷ ರೂ.ನನ್ನಿಂದ ಪಡೆದು ಮೋಸ ಮಾಡಿದ್ದಾರೆ ಎಂದು ತನ್ನ ವಾಟ್ಸ್ ಆಪ್ ಸ್ಟೇಟಸ್ ಲಿ ಬರೆದುಕೊಂಡಿದ್ದಾನೆ ಎನ್ನಲಾಗಿದೆ.
ನ್ಯಾಯಕ್ಕಾಗಿ ಹೆಣ ಇಟ್ಟು ಪ್ರತಿಭಟನೆ:ಮಂಜು ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಮೃತನ ಸಂಬಂಧಿಕರು ಕಾಟ್ನಾಳು ಗ್ರಾಮದ ಕಾಂತ ಅವರ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಬಂಧಿಸಿ ಹಣ ನೀಡುವವರೆಗೂ ಇಲ್ಲಿಂದ ಶವ ತೆಗೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಸಂಬಂಧ ಸಾಲಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸ್ ಇನ್ಸ್ ಪೆಕ್ಟರ್ ಕೃಷ್ಣಂರಾಜು ಹಾಗು ಸಿಬ್ಬಂದಿ ಮೃತನ ಸಂಬಂಧಿಕರು ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದ ಕಾಟ್ನಾಳು ಗ್ರಾಮಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು.