ನವದೆಹಲಿ: ನೀಟ್ ಯುಜಿ ಪರೀಕ್ಷೆಯ ಹಿಂದೆಯೇ ಜುಲೈ ೬ರಿಂದ ನಡೆಸಲು ನಿಗದಿಪಡಿಸಿರುವ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಕೌನ್ಸೆಲಿಂಗ್ ಆರಂಭಿಸಿ, ನಿಲ್ಲಿಸುವ ಪ್ರಕ್ರಿಯೆಯಲ್ಲ ಎಂದೂ ಹೇಳಿದೆ. ನೀಟ್-ಯುಜಿ ೨೦೨೪ ಪರೀಕ್ಷೆಯಲ್ಲಿ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಲು ಕೋರಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಪೀಠ ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿತು. ಪರೀಕ್ಷೆಯನ್ನೇ ರದ್ದುಪಡಿಸಲು ಕೋರಿದ್ದ ಅರ್ಜಿಗಳಿಗೆ ಸಂಬಂಧಿಸಿ ಉತ್ತರ ನೀಡಲು ಸೂಚಿಸಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ನೋಟಿಸ್ ಅನ್ನು ಜಾರಿಮಾಡಿತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್.ವಿ.ಎನ್.ಭಟ್ಟಿ ಅವರಿದ್ದ ರಜಾಕಾಲದ ಪೀಠವು, ಈ ಸಂಬಂಧಿತ ವಿಚಾರಣೆಯನ್ನು ಜುಲೈ ೮ಕ್ಕೆ ಮುಂದೂಡಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು, ನಾವು ಕೌನ್ಸೆಲಿಂಗ್‌ಗೆ ತಡೆ ನೀಡುವಂತೆ ಕೋರುತ್ತಿಲ್ಲ ಪ್ರಕರಣದ ವಿಚಾರಣೆಯು ಜುಲೈ ೮ಕ್ಕೆ ಮುಂದೂಡಿರುವ ಕಾರಣ, ಕನಿಷ್ಠ ಎರಡು ದಿನದ ಮಟ್ಟಿಗೆ ಕೌನ್ಸೆಲಿಂಗ್ ಅನ್ನೂ ಮುಂದೂಡಬಹುದು ಎಂದು ಕೋರಿದರು. ನಾವು ಇದೇ ಹೇಳಿಕೆಯನ್ನು ಆಲಿಸುತ್ತಿದ್ದೇವೆ. ನಿಮ್ಮ ಮಾತಿನ ಮಧ್ಯೆ ಹೇಳುತ್ತಿದ್ದೇವೆ ಎಂದು ಭಾವಿಸಬೇಡಿ. ಕೌನ್ಸೆಲಿಂಗ್ ಎಂಬುದು ಆರಂಭಿಸಿ, ನಿಲ್ಲಿಸುವ ಪ್ರಕ್ರಿಯೆಯಲ್ಲ ಎಂದು ಕೋರ್ಟ್ ಹೇಳಿದೆ.