ಶಿವಮೊಗ್ಗ: ಹೊಸದಾಗಿ ಖರೀದಿಸಿ ನೋಂದಣಿಯಾದ ಆಟೋರಿಕ್ಷಾಗಳಿಗೆ ಪರವಾನಿಗೆಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಡಾ.ಸೆಲ್ವಮಣಿ ಆರ್ ಸೂಚನೆ ನೀಡಿದರು. ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಟೋರಿಕ್ಷಾ ಪರವಾನಗಿ ನೀಡುವ ಕುರಿತು ಏರ್ಪಡಿಸಲಾಗಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದಲ್ಲಿ ನೋಂದಾಯಿತ 304 ಸಂಖ್ಯೆಯ ಆಟೋರಿಕ್ಷಾಗಳಿಗೆ ಪರವಾನಗಿ ಬಾಕಿ ಇದ್ದು ಇವುಗಳಿಗೆ ಪರವಾನಗಿ ನೀಡುವಂತೆ ಸೂಚಿಸಿದರು. ಹಾಗೂ ನಿಯಮದನ್ವಯ 15 ವರ್ಷಗಳಿಗೂ ಮೇಲ್ಪಟ್ಟ ವಾಹನಗಳ ನವೀಕರಣ ಸಾಧ್ಯವಿಲ್ಲವೆಂದು ತಿಳಿಸಿದರು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕರಪ್ಪ ಮಾತನಾಡಿ, ನಗರದಲ್ಲಿ ಸುಮಾರು 4 ಸಾವಿರ ಆಟೋಗಳು ಚಾಲನೆಯಲ್ಲಿವೆ. ಸುಮಾರು 2 ಸಾವಿರ ಆಟೋಗಳ ನವೀಕರಣ ಬಾಕಿ ಇದೆ. ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ನಗರದಲ್ಲಿ ಕೇವಲ 304 ಅಲ್ಲ, ಸುಮಾರು 1200 ನೋಂದಾಯಿತ ಆಟೋಗಳಿದ್ದು ಅವುಗಳಿಗೆಲ್ಲ ಪರವಾನಗಿ ನೀಡಬೇಕು. ಹಾಗೂ ಶೋ ರೂಮಿನವರು ಆಟೋ ಖರೀದಿ ವೇಳೆ ಪರವಾನಗಿ ಕೊಡಿಸುತ್ತೇವೆಂದು 30 ರಿಂದ 40 ಸಾವಿರದವರೆಗೆ ಹಣ ವಸೂಲಿ ಮಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಹಾಗೂ ಆಟೋ ಚಾಲನೆ ವ್ಯಾಪ್ತಿಯನ್ನು 20 ಕಿ.ಮೀ ವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು. ಜಿಲ್ಲಾಧಿಕಾರಿಳು ಪ್ರತಿಕ್ರಿಯಿಸಿ, ಆನ್‍ಲೈನ್‍ನಲ್ಲಿ ಪರವಾನಗಿ ಬಾಕಿ ಕಡಿಮೆ ತೋರಿಸುತ್ತಿದ್ದು, ಈ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಪರವಾನಗಿ ನೀಡಲಾಗುವುದು. ಹಾಗೂ ಪರವಾನಗಿ ಪಡೆಯದ ಆಟೋಗಳ ನೋಂದಣಿ ನಿಲ್ಲಿಸುವಂತೆ ತಿಳಿಸಿದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಗರದಲ್ಲಿ ಹೊಸದಾಗಿ ಆಟೋರಿಕ್ಷಾಗಳನ್ನು ಖರೀದಿಸಿ ನೋಂದಣಿ ಮಾಡಿಸಿಕೊಂಡವರಿಗೆ ಪರವಾನಿಗಿ ನೀಡಬೇಕು. ಹಾಗೂ ನವೀಕರಣಕ್ಕೆ ಅರ್ಹರಾದವರಿಗೆ ನವೀಕರಣ ಮಾಡಬೇಕೆಂದರು ತಿಳಿಸಿದರು. ಆಟೋ ಚಾಲಕರು ಮಾತನಾಡಿ ಆಟೋಗಳಿಗೆ ರೆಟ್ರೊ ಎಲೆಕ್ಟ್ರಿಕ್ ಸ್ಟಿಕ್ಕರ್ ಅಳವಡಿಕೆ ಮಾಡಬೇಕೆಂಬ ನಿಯಮವನ್ನು ತರಲಾಗಿದೆ. ಇದರಿಂದ ಚಾಲಕರಿಗೆ ರೂ.2000 ವರೆಗೆ ಖರ್ಚು ಬರುತ್ತದೆ. ಹಾಗೂ ಎಫ್‍ಸಿ ವೇಳೆ ಇದರ ಬಿಲ್ಲನ್ನು ಕೇಳಲಾಗುವುದರಿಂದ ತೊಂದರೆ ಆಗುತ್ತಿದ್ದು, ಸ್ಟಿಕ್ಕರ್‍ನಿಂದ ವಿನಾಯಿತಿ ಕೋರಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಸ್ಟಿಕ್ಕರ್ ಹಾಕಿಸುವುದು ಒಳ್ಳೆಯದು. ಸ್ಟಿಕ್ಕರ್ ಅಳವಡಿಕೆ ಕುರಿತಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದಲ್ಲಿನ ಗೊಂದಲದ ಬಗ್ಗೆ ಸಂಬಂಧಿಸಿದ ಆಯುಕ್ತರಿಗೆ ಪತ್ರ ಬರೆದು ಸ್ಪಷ್ಪನೆ ಪಡೆಯಲಾಗುವುದು. ಹಳೇ ಸ್ಟಿಕ್ಕರ್ ಇರುವವರು ಹೊಸದಾಗಿ ಹಾಕಿಸುವ ಅವಶ್ಯಕತೆ ಇಲ್ಲವೆಂದರು. ಕೆಲವು ಆಟೋ ಚಾಲಕರು ಓಪನ್ ಪರ್ಮಿಟ್ ನೀಡಿ ವ್ಯಾಪ್ತಿಯನ್ನು 20 ಕಿ.ಮೀ ವರೆಗೆ ವಿಸ್ತರಿಸಬೇಕೆಂದರು. ಮತ್ತು ಹಲವರು ಈಗಾಗಲೇ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಿದ್ದು ಹೊಸ ಪರವಾನಗಿಯನ್ನು ನೀಡಬಾರದೆಂದು ಒತ್ತಾಯಿಸಿದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಟಾಧಿಕಾರಿ ಅನಿಲ್‍ಕುಮಾರ್ ಭೂಮರಡ್ಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕ್ರಪ್ಪ, ಕೆಎಸ್‍ಆರ್‍ಟಿಸಿ ಡಿಸಿ ವಿಜಯಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಸಂತೋಷ್ ಸೇರಿದಂತೆ ಅಧಿಕಾರಿಗಳು, ನಾಗರೀಕ ಹಿತ ರಕ್ಷಣಾ ವೇದಿಕೆಯ ವಸಂತಕುಮಾರ್, ಇತರೆ ಪದಾಧಿಕಾರಿಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದವರು, ಇತರರು ಹಾಜರಿದ್ದರು.