ಮೈಸೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರಿಗೆ ಬೆಳೆ ಪರಿಹಾರ ಘೋಷಣೆ ಮಾಡಿದ್ದು ರೈತರು ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ನೊಂದಣಿ ಮಾಡಿಸಿ ಬೆಳೆ ಪರಿಹಾರ ಪಡೆಯಬೇಕೆಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.
ವರುಣಾ ಕ್ಷೇತ್ರದ ತುಂನೇರಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಡಿಹುಂಡಿ, ನಂದಿಗುಂದ, ತುಂನೇರಳೆ, ನಂದಿಗುಂದಪುರ ಗ್ರಾಮಗಳಿಗೆ ಭೇಟಿನೀಡಿ ಕಂದಾಯ ಅದಾಲತ್ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಬರ ಇದ್ದರೂ ಸಹ ಕೇಂದ್ರಸರ್ಕಾರ ರಾಜ್ಯಕ್ಕೆ ಯಾವುದೇ ಬರ ಪರಿಹಾರ ಬಿಡುಗಡೆ ಮಾಡಿಲ್ಲದಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಿ ರೈತರ ಪರ ನಾವಿದ್ದೇವೆ ಎಂಬುದನ್ನು ಸಾಬೀತು ಪಡಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮನವಿ ಮಾಡಿ ಗ್ರಾಮದ ರಸ್ತೆ ಅಭಿವೃದ್ಧಿಯಾಗಬೇಕು. ಸಿದ್ದಪ್ಪಾಜಿ ದೇವಸ್ಥಾನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಕೊಡಿ, ಅಕ್ಕ-ಪಕ್ಕದ ಗ್ರಾಮಗಳಿಗೆ ಹೋಗುವ ಸಂಪರ್ಕ ರಸ್ತೆಗಳು ಹದಗೆಟ್ಟಿವೆ ಡಾಂಬರು ಹಾಕಿಸಿಕೊಡಿ, ವಿದ್ಯುತ್ ಕಂಬಗಳನ್ನು ಹಾಕಿಸಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಡಾ. ಯತೀಂದ್ರ ಉತ್ತರಿಸಿ ಈ ಹಿಂದೆ ಇದ್ದ ಬಿ.ಜೆ.ಪಿ ಸರ್ಕಾರದಲ್ಲಿ ಯಾವುದೇ ಅನುದಾನ ಬರದೆ ಕಾಮಗಾರಿಗಳನ್ನು ಮಾಡಲು ಆಗಲಿಲ್ಲ. ಈಗ ನಿಮ್ಮೆಲ್ಲರ ಆಶೀರ್ವಾದದಿಂದ ಸಿದ್ದರಾಮಯ್ಯರವರು ೨ನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದರಿಂದ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಡುವುದಾಗಿ ತಿಳಿಸಿದರು.
ಸಭೆಯಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಸ್.ಸಿ. ಬಸವರಾಜು, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ಆಪ್ತಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್, ಗ್ರಾ.ಪಂ. ಅಧ್ಯಕ್ಷ ನಂದೀಶ್, ಸದಸ್ಯರಾದ ಬುಲೆಟ್ ಮಹಾದೇವ, ಪುಟ್ಟಸ್ವಾಮಿ, ಜಿ.ಪಂ. ಮಾಜಿ ಉಪಾಧ್ಯಕ್ಷ ದಯಾನಂದ, ಕೆಂಪಣ್ಣ, ನಾಗೇಂದ್ರ, ರೂಪೇಶ್, ದುದ್ದಗೆರೆ ಮಹಾದೇವ, ಒಲೆಸಿದ್ದು, ಸಿ.ಡಿ.ಪಿ.ಒ. ಮಂಜುಳ, ಕಲ್ಲಳ್ಳಿ ಬಾಬು, ರಂಗಸ್ವಾಮಿ ಹಾಜರಿದ್ದರು.