ಮಂಡ್ಯ: ಕುಟುಂಬದ ಯಜಮಾನಿಗೆ (ಮಹಿಳೆಗೆ) ರೂ ೨೦೦೦/- ನೀಡುವ ಸರ್ಕಾರದ ಮಹಾತ್ವಕಾಂಕ್ಷೆ ಗೃಹ ಲಕ್ಷ್ಮಿ ಯೋಜನೆ ಜಿಲ್ಲೆಯಲ್ಲಿ ಜುಲೈ ೧೯ ರಂದು ಚಾಲನೆ ನೀಡಲಾಗುವುದು ಹಾಗೂ ಜುಲೈ ೨೦ ರಿಂದ ನೊಂದಣಿ ಕಾರ್ಯಗಳು ಯಾವುದೇ ಲೋಪವಾಗದಂತೆ ನಡೆಸಲು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೆಸ್ವಾನ ಮೂಲಕ ಸಭೆ ನಡೆಸಿ ಮಾತನಾಡಿದರು. ನೊಂದಣಿಗೆ ಮಹಿಳೆಯರು ಯಾವುದೇ ಶುಲ್ಕ ನೀಡುವಂತಿಲ್ಲ. ನೊಂದಣಿಯು ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ ಭಾಗದಲ್ಲಿ ಕರ್ನಾಟಕ ಒನ್ ಸೆಂಟರ್ ಹಾಗೂ ಹೆಚ್ಚುವರಿಯಾಗಿ ನಗರಸಭೆ ವ್ಯಾಪ್ತಿಯಲ್ಲಿ ತೆರೆಯುವ ೫, ಪುರಸಭೆ ವ್ಯಾಪ್ತಿಯಲ್ಲಿ-೩ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯುವ ೨ ಕೇಂದ್ರಗಳಲ್ಲಿ ನಡೆಯಲಿದೆ ಎಂದರು.
ನೊಂದಣಿಗೆ ಸ್ಥಳ ಹಾಗೂ ದಿನಾಂಕ ನಿಗದಿ: ಪ್ರತಿದಿನ ಒಂದು ಕೇಂದ್ರದಲ್ಲಿ ೬೦ ಮಹಿಳೆಯರ ನೊಂದಣಿ ನಡೆಯಲಿದೆ. ನೊಂದಣಿ ಕೇಂದ್ರದಲ್ಲಿ ನೂಕು ನುಗ್ಗಲೂ ಉಂಟಾಗಬಾರದು ಎಂದು ಮೊದಲೇ ಮಹಿಳೆಯರಿಗೆ ನೊಂದಣಿಯ ದಿನಾಂಕ, ಸ್ಥಳ ಮತ್ತು ಸಮಯದ ವಿವರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪಟ್ಟಿ ಸಿದ್ಧಪಡಿಸಲಾಗಿದ್ದು, ಎಸ್.ಎಂ.ಎಸ್ ಮೂಲಕ ವಿವರ ಕಳುಹಿಸಿಕೊಡಲಾಗುವುದು. ಎಸ್.ಎಂ.ಎಸ್. ನಲ್ಲಿ ನಿಗಧಿಪಡಿಸಿರುವ ದಿನಾಂಕ ಹಾಗೂ ಕೇಂದ್ರದಲ್ಲಿ ಮಹಿಳೆಯರು ತಪ್ಪದೇ ನೊಂದಣಿ ಮಾಡಿಸಿಕೊಳ್ಳುವುದು. ನಿಗದಿಪಡಿಸಿರುವ ಸಮಯಕ್ಕೆ ಆಗಮಿಸಲು ಸಾಧ್ಯವಾಗದೇ ಇದ್ದಲ್ಲಿ ಅದೇ ದಿನ ಸಂಜೆ ಅವಧಿ ಪಡೆದು ಮಾಡಿಸಿಕೊಳ್ಳುವುದು. ಎಸ್.ಎಂ.ಎಸ್ ಬಾರದೇ ಕೇಂದ್ರಕ್ಕೆ ತೆರಳಿದರೇ ನೊಂದಣಿ ಕೇಂದ್ರದಲ್ಲೂ ನೊಂದಣಿ ಮಾಡಲು ಸಾಧ್ಯವಿಲ್ಲ ಎಂದರು.
ಪಡಿತರ ಚೀಟಿ ಹೊಂದಿರುವ ಆಧಾರ್ ಸೀಡಿಂಗ್ ಆಗಿರುವ ಖಾತೆಗೆ ಹಾಗೂ ಡಿ.ಬಿ.ಟಿ ಪಾವತಿ ಹೊಂದಿರುವ ಕುಟುಂಬದ ಯಜಮಾನಿಗೆ ಎಸ್.ಎಂ.ಎಸ್ ಮೂಲಕ ನೊಂದಣಿಗೆ ವಿವರ ಬರಲಿದೆ. ಆದಾಯ ತೆರಿಗೆ ಪಾವತಿಸುವ ಮಹಿಳೆ ಅಥವಾ ಕುಟುಂಬದ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದಲ್ಲಿ ಅವರುಗಳು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದರು. ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರಜಾ ಪ್ರತಿನಿಧಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇವರಿಗೆ ಯಾವುದೇ ರೀತಿಯ ಗೌರವಧನ ನೀಡಲಾಗುವುದಿಲ್ಲ. ಒಂದು ಸಾವಿರ ಜನಸಂಖ್ಯೆಗೆ ಇಬ್ಬರೂ ಪ್ರಜಾಪ್ರತಿನಿಧಿಯನ್ನು ನೇಮಕ ಮಾಡಲು ಅವಕಾಶವಿದೆ. ಇಬ್ಬರಲ್ಲಿ ಒಬ್ಬರೂ ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಪ್ರಜಾಪ್ರತಿನಿಧಿಗಳು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹಾಗೂ ಮೊಬೈಲ್ ಹೊಂದಿರಬೇಕು. ಎಂದರು. ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ನೊಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಹಶೀಲ್ದಾರ್ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಸೆಂಟರ್‌ಗಳ ಸಿಬ್ಬಂದಿಗಳಿಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜ್ ಅವರು ಮಾತನಾಡಿ ಈ ಯೋಜನೆಯಡಿ ವಯಸ್ಸಾದ ಮಹಿಳೆಯರು, ಗ್ರಾಮೀಣ ಮಹಿಳೆಯರು, ಅನಕ್ಷರಸ್ಥ ಮಹಿಳೆಯರು ಬರುತ್ತಾರೆ. ನೊಂದಣಿ ಕೇಂದ್ರದವರು ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಗ್ರಾಮ ಒನ್ ಸೆಂಟರ್‌ಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಮಹಿಳೆಯರಿಗೆ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ. ಕೃಷ್ಣಕುಮಾರ್ ಅವರು ಮಾತನಾಡಿ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಹಾಗೂ ತಿದ್ದುಪಡಿಯನ್ನು ತಡೆಹಿಡಿಯಲಾಗಿದೆ. ಸರ್ಕಾರ ಮುಂದಿನ ಆದೇಶದಲ್ಲಿ ತಿಳಿಸಿದ ನಂತರ ಸಾರ್ವಜನಿಕರಿಗೆ ಮಾಹಿತಿ ನೀಡಿ ಅರ್ಜಿ ಸ್ವೀಕಾರ ಹಾಗೂ ತಿದ್ದುಪಡಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ.ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್ ರಾಜಮೂರ್ತಿ, ನಗರಸಭೆ ಆಯುಕ್ತ ಆರ್ ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ತುಷಾರಮಣಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ವೇಣುಗೋಪಾಲ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.