ಚಾಮರಾಜನಗರ: ಆಹಾರ ಪದಾರ್ಥಗಳ ತಯಾರಿಕೆ, ವಿತರಣೆ, ಶೇಖರಣೆ ಮಾಡುವ ಎಲ್ಲಾ ಆಹಾರ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಕಡ್ಡಾಯವಾಗಿ ಪರವಾನಗಿ ನೊಂದಣಿ ಪಡೆಯಬೇಕು. ಈ ನಿಟ್ಟಿನಲ್ಲಿ ಹೆಚ್ಚು ಜಾಗೃತಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆಹಾರ ಉದ್ದಿಮೆಗಳಿಗೆ ಅನುಮತಿ ಉದ್ದಿಮೆ ಪರವಾನಗಿ ನೀಡುವ ಮೊದಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ) ಪರವಾನಗಿ, ನೋಂದಣಿ ಕಡ್ಡಾಯಗೊಳಿಸಬೇಕಿದೆ. ಈ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಅನಧಿಕೃತ ಆಹಾರ ತಯಾರಿಕಾ ಘಟಕಗಳಿಗೆ ಭೇಟಿ ಕೊಡಬೇಕು, ಅಧಿಕೃತ ಆಹಾರ ತಯಾರಿಕಾ ಘಟಕಗಳು, ಅಂಗಡಿಗಳು, ಉಗ್ರಾಣಗಳಿಗೂ ಭೇಟಿ ನೀಡಿ ಪರಿಶೀಲಿಸಬೇಕು. ಆಹಾರ ಮಾದರಿಗಳನ್ನು ಸಂಗ್ರಹಿಸಿ ನೊಂದಾಯಿತ ಆಹಾರ ಪ್ರಯೋಗ ಶಾಲೆಗೆ ಕಳುಹಿಸಿ ವಿಶ್ಲೇಷಣಾ ವರದಿಯನ್ನು ಪಡೆಯಬೇಕು ಎಂದರು.
ರಸ್ತೆ ಬದಿ ವ್ಯಾಪಾರಿಗಳಿಗೆ ನಗರಸಭೆ, ಪುರಸಭೆ, ಸ್ಥಳೀಯ ಪಂಚಾಯಿತಿಗಳಿಂದ ಆರೋಗ್ಯ ತಪಾಸಣೆ, ಸ್ವಚ್ಚತೆ ಮತ್ತು ಗುಣಮಟ್ಟ ಆಹಾರ ಪದಾರ್ಥ ಬಳಕೆ ಮಾಡುವ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಾರ್ಗದರ್ಶನ ಮಾಡುವ ಕಾರ್ಯಗಳು ನಡೆಯಬೇಕು. ಆಹಾರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.