ಹೊಸದಿಲ್ಲಿ : ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ರೇಖಾ ಗುಪ್ತಾ ಅವರಿಗೆ ಪ್ರಮಾಣವಚನವನ್ನು ಬೋಧಿಸಿದ್ದಾರೆ. ರೇಖಾ ಗುಪ್ತಾ ದೆಹಲಿಯ 9ನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದು, ನಾಲ್ಕನೇ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರದ್ದಾಗಿದೆ.
ಸಿಎಂ ರೇಖಾ ಗುಪ್ತಾ ಅವರ ಜತೆಗೆ, ಆರು ಬಿಜೆಪಿ ಶಾಸಕರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ಮಾಜಿ ಎಎಪಿ ಸದಸ್ಯ ಕಪಿಲ್ ಮಿಶ್ರಾ, ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ಪಂಕಜ್ ಕುಮಾರ್ ಸಿಂಗ್ ಮತ್ತು ರವೀಂದರ್ ಇಂದ್ರಜ್ ಸಿಂಗ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಮತ್ತು ಪಕ್ಷದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಮತ್ತು ಎನ್‌ಡಿಎ ಮಿತ್ರಪಕ್ಷಗಳ ಉನ್ನತ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.