ಮೈಸೂರು : ಸಂವಹನ ಪ್ರಕಾಶನ ಹೊರತಂದಿರುವ ಹಿರಿಯ ಸಾಹಿತಿ ಡಾ.ಸಿಪಿಕೆ ಅವರ ೮೦೦ ಚಿಂತನ ಬರಹಗಳ ಬೃಹತ್ ಗ್ರಂಥ ಚಿಂತನ ಚಿಂತಾಮಣಿ ಲೋಕಾರ್ಪಣೆ ಸಮಾರಂಭ ಜ.೭ರಂದು ಸಂಜೆ ೫.೩೦ಕ್ಕೆ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಡಾ.ಶಿವರಾತ್ರಿ ರಾಜೇಂದ್ರ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕಿ ಎಚ್.ಟಿ.ಶೈಲಜಾ ತಿಳಿಸಿದರು.
ಸಂವಹನ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಕಲಾಕೂಟದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು,ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಡಾ.ಡಿ.ಎ.ಶಂಕರ್ ಕೃತಿ ಲೋಕಾರ್ಪಣೆ ಮಾಡುವರು. ಕೃತಿ ಕುರಿತು ಹಿರಿಯ ವಿದ್ವಾಂಸ ವಿದ್ವಾನ್ ಎಚ್.ವಿ.ನಾಗರಾಜ ರಾವ್ ಮಾತನಾಡಲಿದ್ದಾರೆ. ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು ಮುಖ್ಯ ಅತಿಯಾಗಿ ಭಾಗವಹಿಸಲಿದ್ದು, ಕನ್ನಡ ಸಾಹಿತ್ಯ ಕಲಾಕೂಟದ ಆಧ್ಯಕ್ಷ ಎಂ.ಚಂದ್ರಶೇಖರ್, ಪ್ರಕಾಶಕ ಡಿ.ಎನ್.ಲೋಕಪ್ಪ ಉಪಸ್ಥಿತರಿರಲಿದ್ದಾರೆ ಎಂದರು.
ಚಿಂತನ ಚಿಂತಾಮಣಿ ಎಂಬುದು ಡಾ.ಸಿಪಿಕೆ ಅವರ ಸಮಗ್ರ ಚಿಂತನ ಬರಹಗಳ ಕೃತಿಯಾಗಿದೆ. ಇದರಲ್ಲಿ ಸಿಪಿಕೆ ಅವರ ೮೦೦ ಚಿಂತನ ಬರಹಗಳಿದ್ದು, ಅವರ ಹಿಂದಿನ ೨೨ ಚಿಂತನ ಕೃತಿಗಳನ್ನು ಒಗ್ಗೂಡಿಸಿರುವ ೧೦೬೦ ಪುಟಗಳ ಸಮಗ್ರ ಸಂಪುಟದ ಬೃಹತ್ ಕೃತಿಯಾಗಿದೆ. ಚಿಂತನ ಸಾಹಿತ್ಯದಲ್ಲಿ ಇಂತಹ ಬೃಹತ್ ಸಂಪುಟವೊಂದು ಪ್ರಕಟವಾಗಿರುವುದು ಇದೇ ಪ್ರಥಮ ಎಂದು ಹೇಳಿದರು.
ಒಂದು ಸಾವಿರ ರೂ. ಮುಖಬೆಲೆಯ ಈ ಕೃತಿಯನ್ನು ಲೋಕಾರ್ಪಣೆ ದಿನ ೫೫೦ ರೂ. ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದರು.