ಮೊಬೈಲ್ ಎಂಬ ಮಾಯಾಪೆಟ್ಟಿಗೆ ಅಲ್ಪ ಸ್ವಲ್ಪ ಓದುಗರನ್ನೂ ಕಸಿದುಕೊಳ್ಳುತ್ತಿದೆ. ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಅಧೋಮುಖವಾಗಿ ಇಳಿಕೆ ಕಾಣುತ್ತಿರುವ ಪುಸ್ತಕ ಸಂಸ್ಕೃತಿಗೆ ಮರುಜೀವ ನೀಡಬೇಕಾದ ಅವಶ್ಯಕತೆಯಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್ ಎಸ್ ಹೊಸಮನಿ ಆತಂಕ ವ್ಯಕ್ತಪಡಿಸಿದರು.
ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಕಳೆದ ೨೦ ವರ್ಷಗಳಿಂದ ನಡೆಯುತ್ತಿರುವ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮದ ೧೭೮ನೇ ಸಂಚಿಕೆಯಲ್ಲಿ ಪ್ರಗತಿ ಗ್ರಾಫಿಕ್ಸ್ ಪ್ರಕಟಿತ ಶಿಕ್ಷಕಿ ಸುಮಾ ಕಳಸಾಪುರ ಸಂಪಾದಿಸಿರುವ ಹಾರಿದೊಡೆ ಸುರಿದಾವು...’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಬೆರಳ ತುದಿಯಲ್ಲಿ ಪುಸ್ತಕಗಳು ಜನಪ್ರಿಯವಾಗುತ್ತಿವೆ. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ಆ ಮೂಲಕವಾದರೂ ಓದುಗರ ಸಂಖ್ಯ ಹೆಚ್ಚಾಗಲಿ ಎಂಬುದು ಮುಖ್ಯ ಉದ್ದೇಶ ಎಂದು ಅವರು ನುಡಿದರು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಆರ್. ಚಂದ್ರಶೇಖರ್ ನಾಡಿನ ಎಂಬತ್ತಕ್ಕೂ ಹೆಚ್ಚು ಜನರ ಕವಿತೆಗಳನ್ನು ಒಂದೆಡೆ ಕಲೆಹಾಕಿ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಂಡ ಈ ಕೃತಿಯ ಮೂಲಕ ಅಪರೂಪದ ಪುಸ್ತಕ ಸಂಸ್ಕೃತಿಯ ಮಜಲು ತೆರೆದಂತಾಗಿದೆ ಎಂದರು.
ಹಾರಿದೊಡೆ ಸುರಿದಾವು…’ ಕೃತಿ ಪರಿಚಯಿಸಿದ ಹಿರಿಯ ನ್ಯಾಯವಾದಿ ಹಾಗೂ ಕತೆಗಾರ್ತಿ ಕವಿತಾ ಮುಚ್ಚಂಡಿ ಇದೊಂದು ಅನನ್ಯವಾದ ಸಂಕಲನ. ಇಲ್ಲಿ ಸಾಹಿತ್ಯದ ಪ್ರಮುಖ ಪ್ರಕಾರವಾದ ಕವನಗಳನ್ನು ಈ ಬಗೆಯಲ್ಲೂ ತರಬಹುದು ಎಂಬುದನ್ನು ತೆರೆದು ತೋರಿಸಿದೆ. ಎಲ್ಲ ಕವಿಗಳೂ ಧ್ಯಾನಸ್ಥ ಸ್ಥಿತಿಯಲ್ಲಿ ಕವಿತೆಗಳನ್ನು ಬರೆದಿದ್ದಾರೆ. ಮುಖಪುಸ್ತಕದಲ್ಲಿ ನೀಡಿದ ಒಂದು ಚಿತ್ರಕ್ಕೆ ಅದೆಷ್ಟು ಆಲೋಚನೆಗಳು ಸೇರಿವೆ. ಇದೊಂದು ವಿಸ್ಮಯಕಾರಿ ಘಟನೆಯೇ ಸರಿ ಎಂದು ಹೇಳಿದರು.
ಸಂಪಾದಕಿ ಸುಮಾ ಕಳಸಾಪುರ ಮಾತನಾಡಿ ಮುಖಪುಸ್ತಕದ ಒಂದು ಪುಟ ಕನ್ನಡ ಕಥಾಗುಚ್ಛ ಸುಮಾರು ಹನ್ನೆರಡು ಮಂದಿಯ ಕಲ್ಪನೆಯ ಕೂಸು. ಇಂದು ಎಪ್ಪತ್ತು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಛಾಯಾಗ್ರಾಹಕ ಶಶಿಕುಮಾರ್ ಕ್ಲಿಕ್ಕಿಸಿದ ಬೈರೇಗೌಡರ ಒಂದು ಚಿತ್ರವನ್ನು ಪ್ರಕಟಿಸಿ ಕವಿತೆ ಬರೆಯಲು ಕನ್ನಡ ಕಥಾಗುಚ್ಚದ ಸದಸ್ಯರಿಗೆ ಕರೆನೀಡಿದೆವು. ಒಂದೇ ದಿನಕ್ಕೆ ಬಂದ ೮೬ ಕವಿತೆಗಳು ಇಲ್ಲಿವೆ. ಇಂಥ ಕಾರ್ಯಕ್ರಮಗಳು ಓದುಗರು ಮತ್ತು ಬರೆಯುವವರು ಎಲ್ಲರನ್ನು ಬೆಸೆಯುವ ಕೊಂಡಿ ಎಂದರು.
ಕೆ.ಎಸ್.ಎA. ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ, ಕತೆಗಾರ ಆರ್‌ಬಿ ಶೆಟ್ಟಿ, ಆಕಾಶವಾಣಿ, ದೂರದರ್ಶನ ನಟ ನಿರೂಪಕ ಜಿ.ಪಿ. ರಾಮಣ್ಣ, ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಸಿ. ಪಾರ್ವತಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ರೂಪಾಂತರ ರಂಗತAಡದ ಕೆ.ಎಸ್.ಡಿ.ಎಲ್. ಚಂದ್ರು ಅವರನ್ನು ಟ್ರಸ್ಟ್ ಪರವಾಗಿ ಅಭಿನಂದಿಸಲಾಯಿತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಡಲ ಕಿನಾರೆಯ ಸಾಹಿತಿ ಡಾ. ಕೆ. ಶಿವರಾಮ ಕಾರಂತರ ಚೋಮನ ದುಡಿ ನಾಟಕವನ್ನು ನಗರದ ರೂಪಾಂತರ ತಂಡ ಪ್ರದರ್ಶಿಸಿತು.