ಬೆಂಗಳೂರು : ಮಂಡ್ಯ ಜಿಲ್ಲೆಯ ರೈತರ ಬೆಳೆಗಳಿಗೆ ಅಗತ್ಯವಿರುವ ನೀರನ್ನು ತಕ್ಷಣವೇ ಕೆಆರ್ಎಸ್ ಜಲಾಶಯದಿಂದ ನಾಲೆಗಳಿಗೆ ಹರಿಸುವಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮಂಡ್ಯದ ರೈತರು ಕಳೆದ ಒಂದು ತಿಂಗಳಿನಿಂದ ಬೆಳೆಗಳಿಗೆ ನೀರು ನೀಡುವಂತೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಸರ್ಕಾರ ಜಾಣ ಕಿವುಡಿನಂತೆ ವರ್ತಿಸುತ್ತಿದ್ದು, ರೈತರ ಭೂಮಿ ಕಸಿಯುವ ವಿಚಾರದಲ್ಲಿ ತೋರುವ ಉತ್ಸಾಹ, ರೈತರ ಬೆಳೆ ಉಳಿಸುವ ವಿಚಾರದಲ್ಲಿ ಕಾಣುತ್ತಿಲ್ಲ. ಇದಕ್ಕೆ ಕಾರಣವೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.
ಮಂಡ್ಯ ರೈತರ ಬೇಡಿಕೆಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿರುವ ಕುಮಾರಸ್ವಾಮಿ, ರೈತರ ಆಕ್ರೋಶ ಕಟ್ಟೆಯೊಡೆಯುವ ಮುನ್ನವೇ ಕೆಆರ್ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಬೇಕು. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.



