ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ ೧೭ ಆರೋಪಿಗಳ ವಿರುದ್ಧ ಇದೀಗ ಪೊಲೀಸರು ನಾಲ್ಕು ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ಗೆ ಸಲ್ಲಿಕೆ ಮಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೆ ಸೆಪ್ಟೆಂಬರ್ ೯ ಕ್ಕೆ ೩ ತಿಂಗಳು ತುಂಬಲಿವೆ. ಈಗಾಗಲೇ ೪೫೦೦ ಪುಟಗಳ ಚಾರ್ಜ್‌ಶೀಟ್ ಮುಕ್ತಾಯಗೊಂಡಿದ್ದು, ಎಸಿಪಿ ಕಚೇರಿಯಿಂದ ದೊಡ್ಡ ಬಾಕ್ಸ್ ಗಳಲ್ಲಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಈ ಮೊದಲು ಎಫ್ಐಆರ್ ಹಾಕುವಾಗ ದರ್ಶನ್ ಎ2 ಆರೋಪಿ ಆಗಿದ್ದರೆ, ಪವಿತ್ರಾ ಗೌಡ ಎ1 ಆರೋಪಿ ಆಗಿದ್ದರು. ಇದನ್ನು ಚಾರ್ಜ್ಶೀಟ್ನಲ್ಲಿ ಬದಲಿಸಬಹುದು ಎಂದು ಊಹಿಸಲಾಗಿತ್ತು. ಆದರೆ, ಆ ರೀತಿ ಆಗಿಲ್ಲ. ಎಸಿಪಿ ಚಂದನ್ ಕುಮಾರ್ ಹಾಗೂ ತನಿಖಾ ತಂಡ ದರ್ಶನ್ ಅವರನ್ನು ಎರಡನೇ ಆರೋಪಿ ಆಗಿ ಉಲ್ಲೇಖ ಮಾಡಿದೆ. ಇದರಿಂದ ಪವಿತ್ರಾ ಅವರು ಎ1 ಆರೋಪಿ ಆಗಿ ಮುಂದುವರಿದಿದ್ದಾರೆ.
ಪ್ರಕರಣ ದಾಖಲಾದ ಬಳಿಕ ೯೦ ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವುದು ನಿಯಮ. ಹಾಗಾಗಿ ಸೆಪ್ಟೆಂಬರ್ ೯ಕ್ಕೆ ೩ ತಿಂಗಳು ಅಂದರೆ ಸಂಪೂರ್ಣವಾಗಿ ೯೦ ದಿನಗಳು ಮುಗಿಯಲಿವೆ. ಹಾಗಾಗಿ ೨೦೦ ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಈಗಾಗಲೇ ಕಾನೂನು ತಜ್ಞರಿಂದ ಪೊಲೀಸ್ ಇಲಾಖೆ ಸಲಹೆಯನ್ನೂ ಪಡೆದಿದೆ. ಎರಡ್ಮೂರು ಬಾರಿ ಪರಿಶೀಲನೆಯನ್ನೂ ಮಾಡಲಾಗಿದೆ. ಅಪರಾಧಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂದು ಖಾಕಿ ಪಡೆ ಭಾರೀ ಎಚ್ಚರಿಕೆ ವಹಿಸಿದೆ.