ಬೆಂಗಳೂರು: ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಲ್ಲಿರುವ ನಟ ದರ್ಶನ್ ಸೇರಿ ೧೭ ಆರೋಪಿಗಳು ಹಾಗೂ ಕೊಲೆಯಾದ ರೇಣುಕಸ್ವಾಮಿ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿರುವ ತನಿಖಾಧಿಕಾರಿಗಳು, ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.
ಆಯಾ ಕಂಪನಿಗಳ ಮೂಲಕ ಸಿಮ್‌ಗಳನ್ನು ಮರು ಚಾಲನೆ ಮಾಡಿಸಿರುವ ಪೊಲೀಸರು ಮಹತ್ವದ ಸಾಕ್ಷ್ಯ ಕಲೆಹಾಕಲು ಮುಂದಾಗಿದ್ದಾರೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆರೋಪಿಗಳು, ರೇಣುಕಸ್ವಾಮಿ ಮೊಬೈಲ್ ಅನ್ನು ಸುಮನಹಳ್ಳಿಯ ರಾಜಕಾಲುವೆಗೆ ಎಸೆದಿದ್ದರು. ಅಲ್ಲದೇ ವೆಬ್ ಆಪ್ ಬಳಸಿ ಮೊಬೈಲ್‌ನಲ್ಲಿದ್ದ ದತ್ತಾಂಶವನ್ನು ಆರೋಪಿಗಳು ನಿಷ್ಕ್ರಿಯಗೊಳಿಸಿದ್ದರು.
ಹೊಸ ಸಿಮ್‌ಕಾರ್ಡ್ ಖರೀದಿಸಿ ತನಿಖೆ ನಡೆಸುತ್ತಿರುವುದರಿಂದ ಆರೋಪಿಗಳು ಕೃತ್ಯ ಎಸಗಿದ ಬಳಿಕ ಯಾರಿಗೆಲ್ಲ ಕರೆ ಮಾಡಿದ್ದರು ಎಂಬುದು ಪತ್ತೆಯಾಗಲಿದೆ ಎಂದು ಪೊಲೀಸರು ಹೇಳಿದರು.
ರೇಣುಕಾಸ್ವಾಮಿಯಿಂದ ಅಶ್ಲೀಲ ಸಂದೇಶ: ರೇಣುಕಸ್ವಾಮಿ ಅವರು ಪವಿತ್ರಾಗೌಡ ಅವರಿಗೆ ಮಾತ್ರವಲ್ಲದೇ ಹಲವು ಕಿರುತೆರೆ ನಟಿಯರಿಗೂ ಅಶ್ಲೀಲ ಸಂದೇಶ ಕಳುಹಿಸಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಕೆಲವರು ರೇಣುಕಸ್ವಾಮಿ ನಂಬರ್ ಅನ್ನು ಬ್ಲಾಕ್ ಮಾಡಿದ್ದರು ಎಂದು ಪೊಲೀಸರು ಹೇಳಿದರು. `ಕೊಲೆಯಾದ ವ್ಯಕ್ತಿಯ ಇ-ಮೇಲ್ ಶೋಧಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.