ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರವೇ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಅಂತಿಮ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಹಲವು ಸಾಕ್ಷಿಗಳು ಲಭ್ಯವಾಗಿದ್ದು, ಎಫ್ ಎಸ್ ಎಲ್ ನಿಂದ ಶೇ. ೯೦ ರಷ್ಟು ವರದಿಗಳು ಬಂದಿದ್ದು, ಸೆಪ್ಟೆಂಬರ್ ೧೦ ರೊಳಗೆ ೪,೦೦೦ ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ರೇಣುಕಾಸ್ವಾಮಿಯನ್ನು ಕೂಡಿ ಹಾಕಿದ್ದ ಪಟ್ಟಣಗೆರೆ ಶೆಡ್ ಗೆ ಜೂನ್ ೮ ರಂದು ನಟ ದರ್ಶನ್ ಹೋಗಿದ್ದರು ಎಂಬುದು ಎಫ್ ಎಸ್ ಎಲ್ ವರದಿಯಲ್ಲಿ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಜೊತೆಗೆ ಕಾರಿನಲ್ಲಿ ರೇಣುಕಾಸ್ವಾಮಿ ಶವ ಸಾಗಾಟ ಮಾಡಿರುವುದೂ ದೃಢಪಟ್ಟಿದೆ. ರೇಣುಕಾಸ್ವಾಮಿ ಕೊಲೆಗೆ ಮೂಲ ಕಾರಣ ಪವಿತ್ರಾಗೌಡ ಎನ್ನಲಾಗಿದ್ದು, ರೇಣುಕಾಸ್ವಾಮಿಗೆ ಪವಿತ್ರಾಗೌಡ ಚಪ್ಪಲಿಯಲ್ಲಿ ಹೊಡೆದಿದ್ದರು. ಕೃತ್ಯ ನಡೆದ ವೇಳೆ ಪವಿತ್ರಾಗೌಡ ಸ್ಥಳದಲ್ಲೇ ಇದ್ದರು ಎನ್ನುವ ಕುರಿತು ಸಾಕ್ಷಿ ಲಭ್ಯವಾಗಿದೆ ಎನ್ನಲಾಗಿದ್ದು, ಸಿಸಿಟಿವಿಯಲ್ಲಿ ಪವಿತ್ರಾಗೌಡ ಇರುವ ದೃಶ್ಯ ಸೆರೆಯಾಗಿದೆ ಎಂದು ಹೇಳಲಾಗಿದೆ.
ರೇಣುಕಾಸ್ವಾಮಿಯ ಪೋಸ್ಟ್ ಮಾರ್ಟಂ ಪರೀಕ್ಷೆಯ ಸ್ಯಾಂಪಲ್ಸ್ ಎಫ್‌ಎಸ್‌ಎಲ್ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ರೇಣುಕಾಸ್ವಾಮಿಯ ಎದೆಯ ಎಲುಬು ಮುರಿದು, ಶ್ವಾಸಕೋಶಕ್ಕೆ ಮೂಳೆ ಚುಚ್ಚಿದ್ದು ಇದರಿಂದಲೇ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇನ್ನು ರೇಣುಕಾಸ್ವಾಮಿ ಮೊಣಕಾಲು ಮೂಳೆ ಮುರಿದು, ಬಲಗಣ್ಣಿಗೂ ಗಾಯವಾಗಿದೆ. ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ.