ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. ೬.೫ರಲ್ಲಿ ಮುಂದುವರಿಸಲು ನಿರ್ಧರಿಸಿರುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪ್ರಕಟಿಸಿದ್ದಾರೆ.
ಬುಧವಾರದಿಂದ ನಡೆದ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಕ್ತಿಕಾಂತ ದಾಸ್ ಅವರು, ಹಣದುಬ್ಬರ ಇನ್ನೂ ಗುರಿಗಿಂತ ಮೇಲೆಯೇ ಇರುವುದರಿಂದ ಇನ್ನಷ್ಟು ಕಾಲ ಬಡ್ಡಿದರ ಮುಂದುವರಿಸುವುದು ಸೂಕ್ತ ಎನ್ನುವ ನಿಲುವು ತಳೆದಿದ್ದಾರೆ. ಕಳೆದ ೧೫-೧೬ ತಿಂಗಳಿಂದ ಆರ್‌ಬಿಐ ತನ್ನ ರೆಪೋ ಅಥವಾ ಬಡ್ಡಿದರದಲ್ಲಿ ಬದಲಾವಣೆ ಮಾಡಿಲ್ಲ. ೨೦೨೩ರ ಫೆಬ್ರುವರಿ ೮ರಂದು ರೆಪೋ ದರವನ್ನು ಶೇ. ೬.೨೫ರಿಂದ ಶೇ. ೬.೫೦ಕ್ಕೆ ಹೆಚ್ಚಿಸಲಾಗಿತ್ತು. ಅಲ್ಲಿಂದ ಈವರೆಗೂ ರೆಪೋ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಇನ್ನಷ್ಟು ತಿಂಗಳು ಇದೇ ದರ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ರೆಪೋದರ, ರಿವರ್ಸ್ ರೆಪೋ, ವಿತ್‌ಡ್ರಾಯಲ್ ಆಫ್ ಅಕಾಮೊಡೇಶನ್, ಎಸ್‌ಎಲ್‌ಆರ್ ಹೀಗೆ ವಿವಿಧ ದರಗಳ ಯಥಾಸ್ಥಿತಿ ಮುಂದುವರಿಯಲಿದೆ. ರೆಪೋ ದರದ ಕುರಿತು ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಈ ಬಾರಿಯ ಎಂಪಿಸಿ ಸಭೆಯ ವಿಶೇಷತೆ ಎಂದರೆ ಯಥಾಸ್ಥಿತಿ ಮುಂದುವರಿಸುವ ನಿರ್ಧಾರದ ಪರವಾಗಿ ೪:೨ರ ಬಹುಮತ ವ್ಯಕ್ತವಾಗಿದೆ.