ಬೆಂಗಳೂರು: ಮಹಾಭಾರತ ಕಾಲದಿಂದ ವರದಿಗಾರಿಕೆ ಇತ್ತು, ಅಂದಿನ ಕಾಲದಲ್ಲಿ ಪತ್ರಕರ್ತರನ್ನು ವಾರ್ತಾಕಾರರು ಎಂದು ಸಂಬೋಧಿಸಲಾಗುತ್ತಿತ್ತು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ’ಪತ್ರಿಕಾ ದಿನ’ ಹಾಗೂ ಹಿರಿಯ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಮಹಾಭಾರತ ಕಾಲದಲ್ಲಿ ವಾರ್ತಾಕಾರರನ್ನು ಕರೆದು ಜನರಿಗೆ ಸುದ್ದಿ ತಲುಪಿಸಲಾಗುತ್ತಿತ್ತು. ಈಗಿನ ಕಾಲದಲ್ಲಿ ಸುದ್ದಿ ತಲುಪಿಸುವ ಜತೆಗೆ ಪತ್ರಕರ್ತರು ಮೌಲ್ಯ ಕಾಪಾಡಿಕೊಳ್ಳಬೇಕು. ಇದೀಗ ತಂತ್ರಜ್ಞಾನ ಸಂಪೂರ್ಣ ಬದಲಾಗಿದ್ದು, ಕೃತಕ ಬುದ್ಧಿಮತ್ತೆ(ಎಐ) ಜತೆಗೆ ಸ್ಪರ್ಧಿಸಬೇಕಿದೆ. ಪತ್ರಕರ್ತರು ಎಐ ಕಾಲಕ್ಕೆ ತಕ್ಕಂತೆ ಆಧುನೀಕರಣಗೊಳ್ಳಬೇಕು. ಡಿ.ವಿ.ಗುಂಡಪ್ಪ ಮಹಾನ್ ದಾರ್ಶನಿಕ. ಅವರು ಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಶುಭವಾಗಲಿ ಎಂದು ಶ್ರೀಗಳು ಹಾರೈಸಿದರು.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ,ಮುದ್ರಣ,ಎಲೆಕ್ಟ್ರಾನಿಕ್ ಮಾಧ್ಯಮಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಇದರಿಂದ ಜನರಿಗೆ ಇನ್ನಷ್ಟು ವಿಶ್ವಾಸ ಬರಲಿದೆ. ಹಿಂದೆ ಪತ್ರಿಕೆಗಳ ಸಂಖ್ಯೆ ಕಡಿಮೆ ಇತ್ತು. ಆದರೆ, ಇಂದಿನ ದಿನಮಾನಗಳಲ್ಲಿ ಪತ್ರಿಕೆ ಮತ್ತು ನ್ಯೂಸ್ ಚಾನಲ್‌ಗಳ ಸಂಖ್ಯೆ ಜಾಸ್ತಿಯಾಗಿವೆ. ಪತ್ರಿಕೋದ್ಯಮದಲ್ಲಿ ಸಾಕಷ್ಟು ಪೈಪೋಟಿ ಇದೆ. ಇದರ ನಡುವೆ ಪತ್ರಕರ್ತರು ವೃತಿನಿಷ್ಠೆ ಮರೆಯಬಾರದು. ವಸ್ತುನಿಷ್ಠ ವರದಿಗಳನ್ನು ಪ್ರಕಟಿಸಲು ಹೆಚ್ಚಿನ ಆದ್ಯತೆ ನೀಡುವಂತಾಗಬೇಕು ಎಂದರು.
ಸಂಘಕ್ಕೆ ಕಚೇರಿ ಕೊಡಿಸುವೆ:
ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಟ್ಟಡ ಕೊಡಿಸುವ ಕೆಲಸವನ್ನು ಮಾಡಲಿದ್ದೇನೆ. ಸಿಎ ನಿವೇಶನ ಇದ್ದರೆ ಸಂಘದವರು ಅರ್ಜಿ ಹಾಕಿದರೆ ಸಿಎಂ ಡಿ.ಕೆ. ಶಿವಕುಮಾರ್ ಅವರ ಬಳಿ ಮಾತನಾಡಿ ಇದನ್ನು ಮಾಡಿಸಿಕೊಡುತ್ತೇನೆ ಎಂದು ಸಚಿವ ರಾಮಲಿಂಗಾರೆಡ್ಡಿ, ಭರವಸೆ ನೀಡುವ ಮೂಲಕ ಸಂಘದ ಬೇಡಿಕೆಗಳಿಗೆ ಸ್ಪಂದಿಸಿದರು. ಇದಕ್ಕೂ ಮುನ್ನ ರಾಜ್ಯದ ಎಲ್ಲ ಜಿಲ್ಲಾ ಸಂಘಗಳು ಆಯಾ ಜಿಲ್ಲೆಯಲ್ಲಿ ಸ್ವಂತ ಕಚೇರಿ ಹೊಂದಿವೆ. ಆದರೆ, ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಈವರೆಗೆ ಸ್ವಂತ ಕಚೇರಿ ಇಲ್ಲ. ಹಾಗಾಗಿ, ನಮ್ಮ ಸಂಘಕ್ಕೆ ಕಚೇರಿ ನಿರ್ಮಿಸಲು ಸ್ಥಳ ಅಥವಾ ಕಟ್ಟಡ ನೀಡಬೇಕು. ನಿಯತಕಾಲಿಕೆ ಪತ್ರಿಕೆಗಳಿಗೆ ಕನಿಷ್ಠ 10 ಸಾವಿರ ರೂ. ಜಾಹೀರಾತು ನೀಡಬೇಕು ಎಂದು ಸಂಘದವರು ಸಚಿವರಿಗೆ ಮನವಿ ಮಾಡಿದರು.



