ಚೆನ್ನೈ: ವಿಶ್ವ ಚೆಸ್ ಚಾಂಪಿಯನ್ ಡಿ. ಗುಕೇಶ್ ತಮಗೆ ಲಭಿಸಿದ 11.45 ಕೋಟಿ ರೂ. ಬಹುಮಾನ ಮೊತ್ತದಲ್ಲಿ 4.8 ಕೋಟಿ ರೂ. (ಶೇ. 30+ಶೇ.4 ಆರೋಗ್ಯ, ಶಿಕ್ಷಣ ಸೆಸ್) ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಾಗಿದೆ. ಹೀಗಾಗಿ, ದೇಶಕ್ಕೆ ಹೆಮ್ಮೆ ತಂದಿರುವ ಗುಕೇಶ್ಗೆ ತೆರಿಗೆ ವಿನಾಯಿತಿ ನೀಡಬೇಕೆಂದು ತಮಿಳುನಾಡಿನ ಕಾಂಗ್ರೆಸ್ ಸಂಸದೆ ಆರ್. ಸುಧಾ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಗುಕೇಶ್ ಚಾಂಪಿಯನ್ ಆಗಿ ತವರಿಗೆ ಮರಳಿದ ವೇಳೆ ಅವರಿಗೆ ಸಿಕ್ಕ 11.45 ಕೋಟಿ ರೂ. ಬಹುಮಾನ ಮೊತ್ತದಲ್ಲಿ 4.8 ಕೋಟಿ ರೂ. ಮೊತ್ತ ತೆರಿಗೆ ಕಟ್ಟಬೇಕೆಂಬ ಕೆಲ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲ ನೆಟ್ಟಿಗರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಕೇಶ್ ಫೋಟೊ ಹಾಕಿ ಚೆಕ್ ಮತ್ತು ಚೆಕ್ ಮೇಟ್ ಎನ್ನುವ ಅಡಿ ಬರಹದಲ್ಲಿ ಮೀಮ್ಸ್‌ಗಳನ್ನು ಹರಿಬಿಟ್ಟಿದ್ದರು.
ಇದೀಗ ಗುಕೇಶ್ಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಸಂಸದೆ ಆರ್. ಸುಧಾ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಈ ಹಿಂದೆ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ರವಿಶಾಸ್ತ್ರಿಗೆ ತೆರಿಗೆ ವಿನಾಯಿತಿ ನೀಡಿದ ವಿಶೇಷ ಸಂದರ್ಭಗಳನ್ನು ಅವರು ನೆನಪಿಸಿದ್ದಾರೆ.
ಕೆಲ ಮೂಲಗಳ ಪ್ರಕಾರ, ಟೂರ್ನಿ ನಡೆದಿರುವುದು ಸಿಂಗಾಪುರದಲ್ಲಾಗಿರುವ ಕಾರಣ ಗುಕೇಶ್ ಅಲ್ಲೇ ತೆರಿಗೆ ಪಾವತಿಸಬೇಕಿದೆ. ಅಲ್ಲದೆ ಭಾರತ-ಸಿಂಗಾಪುರ ನಡುವಿನ ಅವಳಿ ತೆರಿಗೆ ತಪ್ಪಿಸುವ ಡಿಟಿಎಎ ಒಪ್ಪಂದದ ಪ್ರಕಾರ ಅವರು ಭಾರತದಲ್ಲಿ ತೆರಿಗೆ ಕಟ್ಟಬೇಕಿಲ್ಲ. ಸಿಂಗಾಪುರದಲ್ಲಿ ಗುಕೇಶ್ ಶೇ. 22 ಅಂದರೆ 2.52 ಕೋಟಿ ರೂ. ತೆರಿಗೆ ಪಾವತಿಸಿದರೆ ಸಾಕು ಎನ್ನುವ ವರದಿಗಳು ಕೂಡ ಇವೆ.
ಕಳೆದ ವಾರ ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಹೋರಾಟದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು7.7- 6.5 ಅಂತರದಿಂದ ಮಣಿಸಿ ಡಿ. ಗುಕೇಶ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿಕೊಂಡಿದ್ದರು. ಗೆಲುವಿನಲ್ಲಿ ದಕ್ಷಿಣ ಆಫ್ರಿಕಾದ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರ ಮಾರ್ಗದರ್ಶನ ಕೂಡ ನೆರವಾಯಿತು ಎಂದು ಗುಕೇಶ್ ಹೇಳಿದ್ದರು
ಗುಕೇಶ್ 2006ರ ಮೇ 29ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿ ಅಲ್ಲೇ ಬೆಳೆದಿದ್ದರೂ, ಅವರ ಮಾತೃಭಾಷೆ ತೆಲುಗು. ಯಾಕೆಂದರೆ ಅವರ ಕುಟುಂಬದ ಮೂಲ ಆಂಧ್ರ ಪ್ರದೇಶದ ಗೋದಾವರಿ ಆಗಿದೆ. ತಮ್ಮ 12ನೇ ವಯಸ್ಸಿನಲ್ಲಿ ಗುಕೇಶ್ 2017ರಲ್ಲಿ 34ನೇ ಕ್ಯಾಪೆಲ್ಲೆ-ಲಾ-ಗ್ರ್ಯಾಂಡೆ ಓಪನ್‌ನಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಸ್ಪರ್ಧೆಯಾದ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮೂರನೇ ಕಿರಿಯ ಆಟಗಾರನೆನಿಸಿಕೊಂಡಿದ್ದರು.