ಗುಂಡ್ಲುಪೇಟೆ: ತಾಲೂಕು ಕಚೇರಿಯಲ್ಲಿ ಹೆಚ್ಚುವರಿ ಆಧಾರ್ ತಿದ್ದುಪಡಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಶಿರಸ್ತೇದಾರ್ ಮಹೇಶ್ ಅವರಿಗೆ ಕರವೇ(ಪ್ರವೀಣ್ ಶೆಟ್ಟಿ)ದ ವತಿಯಿಂದ ಮನವಿ ಸಲ್ಲಿಸಲಾಯಿತು.
ಪಟ್ಟಣದ ತಾಲೂಕು ಕಚೇರಿಯ ತಹಸೀಲ್ದಾರ್ ಕಚೇರಿ ಬಳಿ ತೆರಳಿದ ಕರವೇ(ಪ್ರವೀಣ್ ಶೆಟ್ಟಿ) ಬಣದ ಪದಾಧಿಕಾರಿ, ತಾಲೂಕು ಕಚೇರಿಗೆ ಪ್ರತಿ ದಿನ ಆಧಾರ್ ತಿದ್ದುಪಡಿ ಮಾಡಿಸಲು 700 ರಿಂದ 800 ಮಂದಿ ಬರುತ್ತಿದ್ದಾರೆ. ಪ್ರಸ್ತುತ ತಾಲೂಕು ಕಚೇರಿಯಲ್ಲಿ ಒಂದು ತಿದ್ದುಪಡಿ ಕೇಂದ್ರ ಮಾತ್ರವಿದ್ದು ಜನರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಜೊತೆಗೆ ಸಾರ್ವಜನಿಕರಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು.
ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಹಾಗೂ ಪುರುಷರು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಸರದಿ ಸಾಲಿನಲ್ಲಿ ನಿಂತರು ಟೋಕನ್ ಸಿಗದೇ ರಾತ್ರಿ ಇಡೀ ತಾಲೂಕು ಕಚೇರಿ ಆವರಣದಲ್ಲಿ ಮಲಗುತ್ತಿದ್ದಾರೆ. ಆದ್ದರಿಂದ ಕೂಡಲೇ ತಾಲೂಕು ಆಡಳಿತ ಐದು ಆಧಾರ್ ತಿದ್ದುಪಡಿ ಕೇಂದ್ರಗಳನ್ನು ತೆರೆದು ಜನ ಸಾಮಾನ್ಯರಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ(ಪ್ರವೀಣ್ ಶೆಟ್ಟಿ) ಬಣದ ಜಿಲ್ಲಾಧ್ಯಕ್ಷ ಆರ್.ಮೋಹನ್ ರವರು ಮಾತನಾಡಿ, ಮೂರು ದಿನಗಳಲ್ಲಿ ಹೆಚ್ಚುವರಿ ತಿದ್ದುಪಡಿ ಕೇಂದ್ರ ತೆರೆಯದಿದ್ದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕರವೇ(ಪ್ರವೀಣ್ ಶೆಟ್ಟಿ) ಬಣದ ತಾಲೂಕು ಅಧ್ಯಕ್ಷ ಮಂಜು.ಆರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷಾ, ಉಪಾಧ್ಯಕ್ಷ ಮಣಿ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.