ಮೈಸೂರು: ತಂತ್ರಜ್ಞಾನದಿಂದ ಮಾಹಿತಿ ಪ್ರವಾಹದ ರೀತಿಯಲ್ಲಿ ಸಿಗುತ್ತಿದೆ. ಹೀಗಾಗಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಮಾದರಿ ಹಾಗೂ ಪರಿಭಾಷೆ ಬದಲಾಗಬೇಕಿದೆ ಎಂದು ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಎಚ್.ಎಸ್.ಪ್ರಭಾಕರ್ ಪ್ರತಿಪಾದಿಸಿದರು.
ಮಾನಸಗಂಗೋತ್ರಿಯ ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಹಾಗೂ ಇತಿಹಾಸ ಅಧ್ಯಯನ ವಿಭಾಗವು ಗುರುವಾರ ಆಯೋಜಿಸಿದ್ದ ೨೮ನೇ ಇತಿಹಾಸ ಪುನಶ್ಚೇತನ ಶಿಬಿರದಲ್ಲಿ ಸಾಂಸ್ಕೃತಿಕ ಅಧ್ಯಯನದ ಹೊಸ ದೃಷ್ಟಿಕೋನ ಕುರಿತು ಮಾತನಾಡಿದರು.
ಸಾಂಸ್ಕೃತಿಕ ಇತಿಹಾಸವನ್ನು ಹೊಸ ದೃಷ್ಟಿಕೋನದಲ್ಲಿ ಅರಿಯಲು ಹಾಗೂ ಸಂಶೋಧನೆಗಳನ್ನು ನಡೆಸಲು ಕೃತಕ ಬಿದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಸಹಕಾರ ಮತ್ತಷ್ಟು ಹೆಚ್ಚಬೇಕಿದೆ ಎಂದರು.
ಒಬ್ಬರೇ ಸಂಶೋಧನೆ ನಡೆಸಿ ಸತ್ಯದ ಇತಿಹಾಸ ಬರೆಯಲಾಗದು. ದೇಶಕಾಲವನ್ನು ಮೀರುವ ಸಾರ್ವಕಲಿಕ ಸತ್ಯಗಳನ್ನು ರೂಪಿಸಲು ಚರ್ಚೆ ಸಂವಾದಗಳು ಹೆಚ್ಚು ನಡೆಯಬೇಕು. ಸಾಂಸ್ಕೃತಿಕ ಇತಿಹಾಸವನ್ನು ಬರೆಯಲು ಈ ಮಾದರಿ ಅಧ್ಯಯನ ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು. ದಶಕಗಳ ಹಿಂದೆ ಗ್ರಂಥಾಲಯ, ಗ್ಯಾಲರಿ, ಆರ್ಕೈವ್ ಹಾಗೂ ವಸ್ತುಸಂಗ್ರಹಾಲಯಗಳೇ ಇತಿಹಾಸ ಅರ್ಥೈಸಿಕೊಳ್ಳುವ ಮಾರ್ಗವಾಗಿದ್ದವು. ಇದೀಗ ತಂತ್ರಜ್ಞಾನವು ಎಲ್ಲವನ್ನು ಸುಲಭೀಕರಿಸಿದೆ. ಮೈಸೂರಿನಲ್ಲೇ ಕುಳಿತು ವಿದೇಶದ ವಿಶ್ವವಿದ್ಯಾಲಯದ ಪುಸ್ತಕವನ್ನು ಓದಬಹುದು ಎಂದರು.
ಕಲಿಕೆಯನ್ನು ಮೊಬೈಲ್ ಸರಳಗೊಳಿಸಿದೆ. ಹೀಗಾಗಿ, ಬೋಧಕರು ತಂತ್ರಜ್ಞಾನದ ಬಳಕೆಯೊಂದಿಗೆ ವಿಭಿನ್ನವಾಗಿ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ನಿರ್ಮಾಣವಾಗಿದೆ. ಕೌಶಲಗಳನ್ನು ಉನ್ನತೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತಿಹಾಸ ತಜ್ಞರು ಎಲ್ಲ ವಿಷಯಗಳ ಜ್ಞಾನವೂ ಇರಬೇಕು. ಗಡಿಯನ್ನು ಹಾಕಿಕೊಳ್ಳಬಾರದು. ಸಮಾಜಶಾಸ್ತ್ರ, ವಿಜ್ಞಾನ, ಭೂಗೋಳ ಎಲ್ಲದರ ಪರಿಚಯವೂ ಇರಬೇಕು ಎಂದರು.
ಇತಿಹಾಸವು ಸಂಶೋಧನೆಯಲ್ಲಿ ಸಾಂಸ್ಕೃತಿಕ ಅಧ್ಯಯನವು ಗಂಭೀರ ವಿಷಯವಾಗಿರಲಿಲ್ಲ. ಕಳೆದ ಎರಡು ದಶಕದಿಂದ ಪ್ರಾಚ್ಯ ಹಾಗೂ ಮಧ್ಯಕಾಲೀನ ಭಾರತ ವಿಶ್ವ ಇತಿಹಾಸವನ್ನು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಗ್ರಹಿಸಲಾಗುತ್ತಿದೆ. ನಾಗರಿಕತೆಯಲ್ಲಿ ಸಂಸ್ಕೃತಿಗೆ ಹೆಚ್ಚು ಮಹತ್ವ ಬಂದಿದೆ. ಅದು ಚಕ್ರದ ಮಧ್ಯದಲ್ಲಿರುವ ಜಾಲಬಂಧವಾಗಿದೆ ಎಂದು ಉದಾಹರಿಸಿದರು. ಕೇಂದ್ರದ ನಿರ್ದೇಶಕಿ ಪ್ರೊ.ಎಸ್.ಎಸ್.ಮಾಲಿನಿ, ಇತಿಹಾಸ ಅಧ್ಯಯನ ವಿಭಾಗದ ಪ್ರೊ.ಜಿ.ಟಿ.ಸೋಮಶೇಖರ್, ಶಿಬಿರದ ಸಂಯೋಜಕ ಪ್ರೊ.ಕೆ.ಸದಾಶಿವ ಇದ್ದರು.