ಮೈಸೂರು: ಸಾಮಾಜಿಕ ಬದಲಾವಣೆ ತರುವ ಗುಣಮಟ್ಟದ ಸಂಶೋಧನೆ ಮಾಡಲು ಸಂಶೋಧಕರು ಹೆಚ್ಚು ಸೃಜನಶೀಲರಾಗಿರಬೇಕು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಕರ್ನಲ್ ಪ್ರೊ.ವೈ.ಎಸ್.ಸಿದ್ದೇಗೌಡ
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಸಂಯುಕ್ತವಾಗಿ ಜಿ೨೦ ಜನಭಾಗೀದಾರಿ ಅಂಗವಾಗಿ ಸಂಶೋಧನಾ ವಿಧಾನ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಳಿನ ಸವಾಲುಗಳನ್ನು ಎದುರಿಸಲು ಯುವಕರಿಗೆ ಸೂಕ್ತ ಮಾನ್ಯತೆಯ ಅಗತ್ಯವಿದೆ. ನವೀನ ಮತ್ತು ಸೃಜನಶೀಲ ಮನಸ್ಸನ್ನು ಅಳವಡಿಸಿಕೊಂಡಾಗ ಮಾತ್ರ ಜ್ಞಾನದ ಸೃಷ್ಟಿ, ಸಂಚಯ ಮತ್ತು ಸಮೀಕರಣ ಸಾಧ್ಯ. ಗುಣಮಟ್ಟದ ಬದಲಾವಣೆ ತರಲು ಪ್ರತಿಯೊಬ್ಬ ಸಂಶೋಧಕರು ಶ್ರಮಿಸಬೇಕು ಮತ್ತು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಸಂಶೋಧಕರು ಸಮಾಜಕ್ಕೆ ಅನುಕೂಲವಾಗುವ ಸಂಶೋಧನಾ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಯುವ ಸಂಶೋಧಕರು ಕುತೂಹಲ ಬೆಳೆಸಿಕೊಂಡು ವಿನೂತನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜಿನ ಮುಖ್ಯ ಕಾರ್ಯ ನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಪರಿಕಲ್ಪನೆಯ ಟಿಪ್ಪಣಿ, ಕಾಲೇಜಿನ ಮೈಲಿಗಲ್ಲುಗಳು ಮತ್ತು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ, ಜಿ೨೦ಯಲ್ಲಿ ಭಾರತದ ಅಧ್ಯಕ್ಷ ಸ್ಥಾನ ಮತ್ತು ಅದರಲ್ಲಿ ಒಳಗೊಂಡಿರುವ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು. ಉತ್ತಮ ಸಂಶೋಧನಾ ವಿಧಾನ ಉತ್ತಮ ಸಂಶೋಧನಾ ಫಲಿತಾಂಶಕ್ಕೆ ಕಾರಣವಾಗುತ್ತದೆ. ವಿಚಾರದೃಷ್ಟಿಯನ್ನು ಕಾರ್ಯಗತಗೊಳಿಸಲು, ಸಂಶೋಧನಾ ವಿಧಾನ ಕುರಿತು ಸಂಶೋಧನಾ ವಿದ್ವಾಂಸರಿಗೆ ತರಬೇತಿ, ಮರುನಿರ್ದೇಶನ ಮತ್ತು ಪುನಃ ಸಕ್ರಿಯಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ.ಡಿ.ಆನಂದ್ ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆಯ ನಿಲುವಿನ ಕುರಿತು ಸಭಿಕರ ಗಮನಕ್ಕೆ ತಂದರು. ಶೈಕ್ಷಣಿಕ ಸಂಶೋಧನೆಯಲ್ಲಿ ಗುಣಮಟ್ಟ ತರಲು ವಿಚಾರ ಸಂಕಿರಣಕ್ಕೆ ಆಯ್ಕೆ ಮಾಡಿಕೊಂಡಿರುವ ವಿಷಯಗಳು ಅತ್ಯಂತ ಸೂಕ್ತವಾಗಿವೆ. ಸಂಶೋಧನೆ ಸತ್ಯ ಮತ್ತು ಅದನ್ನು ಹುಡುಕುವುದಲ್ಲದೆ ಬೇರೇನೂ ಅಲ್ಲ. ಜ್ಞಾನ ನಿರಂತರವಾಗಿ ತನ್ನ ಪರಿಣಾಮಕಾರಿಯಾದ ಪ್ರತಿಫಲ ಕೊಡುವಂತೆ ಸಂಶೋಧನೆ ನಡೆಯಬೇಕು ಎಂದು ಹೇಳಿದರು.
ವಿಚಾರ ಸಂಕಿರಣ ಮೂರು ವಿವಿಧ ಅಧಿವೇಶನಗಳಲ್ಲಿ ವಿವಿಧ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳಿಂದ ವಿಭಿನ್ನ ತಾಂತ್ರಿಕ ವಿಷಯಗಳಲ್ಲಿ ನಡೆಯಿತು.