Thursday, April 3, 2025
Google search engine

Homeದೇಶಬಾಂಗ್ಲಾದೇಶದಲ್ಲಿ ಮೀಸಲಾತಿ ಹಿಂಸಾಚಾರ: 105 ಮಂದಿ ಸಾವು, ಕರ್ಫ್ಯೂ ಜಾರಿ

ಬಾಂಗ್ಲಾದೇಶದಲ್ಲಿ ಮೀಸಲಾತಿ ಹಿಂಸಾಚಾರ: 105 ಮಂದಿ ಸಾವು, ಕರ್ಫ್ಯೂ ಜಾರಿ

ಢಾಕಾ: ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೂ ಸುಮಾರು ೧೦೫ ಮಂದಿ ಸಾವಿಗಿಡಾಗಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ವಿವಿಧ ಪ್ರಕರಣಗಳಲ್ಲಿ ಈವರೆಗೂ ಸುಮಾರು ೧೦೫ ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ವಾರದ ಹಿಂದೆ ಆರಂಭಗೊಂಡಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗುರುವಾರದವರೆಗೆ ದೇಶದ ವಿವಿಧೆಡೆ ೭೫ ಮಂದಿ ಮೃತಪಟ್ಟಿದ್ದರು. ಢಾಕಾದ ಮೂರು ಆಸ್ಪತ್ರೆಗಳಲ್ಲಿ ೨೪ ಮಂದಿ ಹಾಗೂ ರಂಗ್‌ಪುರದಲ್ಲಿ ಆರು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಕೆಲವೆಡೆ ಇಂಟರ್ನೆಟ್ ಹಾಗೂ ಮೊಬೈಲ್ ಸೇವೆ ಕಡಿತಗೊಳಿಸಲಾಗಿದ್ದು ಪ್ರತಿಭಟನಕಾರರ ಮೇಲೆ ಪೊಲೀಸರು, ಭದ್ರತಾ ಪಡೆಗಳು ಗುಂಡಿನ ದಾಳಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಕಳೆದೊಂದು ವಾರದಲ್ಲಿ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ ೧೦೫ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಳಿಗ್ಗೆ ರಾಜಧಾನಿ ಢಾಕಾದಲ್ಲಿ ಇಂಟರ್‌ನೆಟ್ ಸೇವೆ ಆರಂಭಗೊಂಡರೂ, ನಿಧಾನಗತಿಯಿಂದ ಸಾಮಾಜಿಕ ಜಾಲತಾಣ ಗಳಾದ ಫೇಸ್‌ಬುಕ್, ವಾಟ್ಸ್ ಆಪ್ ಪುಟಗಳು ತೆರೆಯುತ್ತಿರಲಿಲ್ಲ.

ಮಾಧ್ಯಮ, ಪತ್ರಿಕೆ ದತ್ತಾಂಶ ಕಚೇರಿಗಳ ಮೇಲೂ ದಾಳಿ : ಪ್ರತಿಭಟನಕಾರರು ಡೇಟಾ ಕೇಂದ್ರಗಳು, ಕೆಲ ಮಾಧ್ಯಮ ಮತ್ತು ಪತ್ರಿಕಾ ಕಚೇರಿಗಳ ಮೇಲೂ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಕೆಲವು ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೆ ಸಾಕಷ್ಟು ತಾಂತ್ರಿಕ ಉಪಕರಣಗಳು ಹಾನಿಗೊಳಗಾಗಿದ್ದು, ಇದರಿಂದ ಹಿಂದಿನಂತೆ ಮತ್ತೆ ಇಂಟರ್‌ನೆಟ್ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಬಾಂಗ್ಲಾದೇಶ ದೂರಸಂಪರ್ಕ ನಿಯಂತ್ರಣ ಆಯೋಗವು ಶುಕ್ರವಾರ ಹೇಳಿಕೆ ನೀಡಿದೆ.

ಕರ್ಫ್ಯೂ ಜಾರಿ: ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ೧೦೫ ಸಾವನ್ನಪ್ಪಿರುವ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ಸರ್ಕಾರ ದೇಶದಲ್ಲಿ ಕರ್ಫ್ಯೂ ಜಾರಿ ಮಾಡಿದೆ. ಲಕ್ಷಾಂತರ ಸೈನಿಕರನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ದೇಶಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

೩೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್: ಬಾಂಗ್ಲಾದೇಶದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯಿಂದಾಗಿ ಭಾರತೀಯ ವಿದ್ಯಾರ್ಥಿಗಳು ಅನ್ಯ ಮಾರ್ಗವಿಲ್ಲದೇ ಸ್ವದೇಶಕ್ಕೆ ವಾಪಸ್ ಆಗುವಂತಾಗಿದೆ. ಸಂಘರ್ಷದಿಂದಾಗಿ ಅಲ್ಲಿನ ಸಾರಿಗೆ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಲಭ್ಯವಿರುವ ವಿಧಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ಶುಕ್ರವಾರವಷ್ಟೇ ಈಶಾನ್ಯದಲ್ಲಿ ಸುಮಾರು ೩೦೦ ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಇಂಡೋ-ಭಾರತ ಗಡಿ ಕೇಂದ್ರಗಳ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತಕ್ಕೆ ಹಿಂದಿರುಗಿದ ಅನೇಕ ವಿದ್ಯಾರ್ಥಿಗಳು ಎಂಬಿಬಿಎಸ್ ಪದವಿಗಳನ್ನು ಪಡೆಯುತ್ತಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶ, ಹರಿಯಾಣ, ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರದ ಮೂಲದವರು ಎನ್ನಲಾಗಿದೆ. ವಿದ್ಯಾರ್ಥಿಗಳು ಶುಕ್ರವಾರ ಹಿಂದಿರುಗಲು ಬಳಸುತ್ತಿದ್ದ ಎರಡು ಪ್ರಮುಖ ಮಾರ್ಗಗಳೆಂದರೆ ತ್ರಿಪುರಾದ ಅಗರ್ತಲಾ ಬಳಿಯ ಅಖುರಾಹ್‌ನಲ್ಲಿರುವ ಅಂತರಾಷ್ಟ್ರೀಯ ಭೂ ಬಂದರು ಮತ್ತು ಮೇಘಾಲಯದ ದೌಕಿಯಲ್ಲಿರುವ ಅಂತರಾಷ್ಟ್ರೀಯ ಭೂ ಬಂದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಗಳು ಬಂದ್: ಢಾಕಾ ವಿಶ್ವವಿದ್ಯಾನಿಲಯದಲ್ಲಿ ಹಿಂಸಾಚಾರ ಸೋಮವಾರದಿಂದ ಗಮನಾರ್ಹವಾಗಿ ಉಲ್ಬಣಗೊಂಡಿದ್ದು, ಈವರೆಗೂ ಆರು ಜನರು ಸಾವನ್ನಪ್ಪಿದ್ದಾರೆ. ಪರಿಣಾಮ ದೇಶಾದ್ಯಂತ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರವು ಆದೇಶ ನೀಡಿದೆ.

RELATED ARTICLES
- Advertisment -
Google search engine

Most Popular