ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷ ತಾರಕಕ್ಕೇರಿದ್ದು, ರಾಜ್ಯ ಸರ್ಕಾರವನ್ನ ಬಿಟ್ಟುಬಿಡದೆ ಪತ್ರದ ಮೂಲಕ ರಾಜ್ಯಪಾಲರು ಕಾಡುತ್ತಿದ್ದಾರೆ. ಸರ್ಕಾರದ ವಿರುದ್ಧದ ಪ್ರತಿ ದೂರಿಗೂ ವಿವರಣೆಯನ್ನು ಕೇಳಿ ಥಾವರ್ ಚೆಂದ್ ಗೆಹ್ಲೋಟ್ ಅವರು ಪತ್ರ ಬರೆಯುತ್ತಿದ್ದಾರೆ.
ಅಲ್ಲದೇ ರಾಜ್ಯಪಾಲರ ಪತ್ರಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಲೆಕೆಡಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರ ಪತ್ರ ಸಮರಕ್ಕೆ ಸಿದ್ದರಾಮಯ್ಯ ಪ್ರತ್ಯಸ್ತ್ರ ಹೂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಯಾವುದೇ ಪತ್ರಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಉತ್ತರಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ. ಯಾವುದೇ ಪತ್ರ ಬರೆದರೂ ಸಂಪುಟದ ಗಮನಕ್ಕೆ ತರಲು ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಸಂಪುಟಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಎಚ್ಕೆ ಪಾಟೀಲ್, ಕಾರ್ಯದರ್ಶಿ ಬದಲು ಸಂಪುಟದ ಮೂಲಕ ರಾಜ್ಯಪಾಲರ ಪತ್ರಗಳಿಗೆ ಸರ್ಕಾರದ ಉತ್ತರ ನೀಡಲು ನಿರ್ಧರಿಸಲಾಗಿದೆ ಎಂದರು.