ಚನ್ನಪಟ್ಟಣ: ಮುಂಜಾನೆ ಎದ್ದು ನಗರದ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರಿಗೆ ನಮ್ಮ ತಂದೆ-ತಾಯಿಗೆ ನೀಡಿದಷ್ಟು ಗೌರವ ನೀಡಬೇಕು ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅಭಿಪ್ರಾಯಿಸಿದರು.
ಪಟ್ಟಣದ ನಗರಸಭೆಯಲ್ಲಿ ಬುಧವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕಾವೇರಿ ಸರ್ಕಲ್‌ನಲ್ಲಿ ನಗರಸಭೆಯ ಎಲ್ಲಾ ಪೌರಕಾರ್ಮಿಕರನ್ನು ಪುಷ್ಪವೃಷ್ಠಿ ಮೂಲಕ ಗೌರವಿಸಿ ಹಣ್ಣು ವಿತರಿಸಿ ಅಭಿನಂದಿಸಿದ ಬಳಿಕ ಮಾತನಾಡಿದ ಅವರು, ಜನರು ಆರೋಗ್ಯವಂತರಾಗಿರಲು ಸಮಾಜದಲ್ಲಿ ಸ್ವಚ್ಚತೆ ಪ್ರಮುಖವಾಗಿದ್ದು ಮಳೆ, ಚಳಿಯನ್ನು ಲೆಕ್ಕಿಸದೆ ಮುಂಜಾನೆ ೫ ಗಂಟೆಗೆ ಪಟ್ಟಣದ ರಸ್ತೆಗಳಲ್ಲಿನ ಕಸವನ್ನು ಸ್ವಚ್ಚತೆ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜದ ಆರೋಗ್ಯಕ್ಕೆ ತಮ್ಮದೆ ಕೊಡುಗೆ ನೀಡುವ ಪೌರಕಾರ್ಮಿಕರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು.
ನಮಗೆ ಆರೋಗ್ಯ ಸರಿಯಿಲ್ಲ ಎಂದರೆ ನಮ್ಮ ತಂದೆತಾಯಿ ಎಷ್ಟು ನಮ್ಮನ್ನು ಕಾಳಜಿ ಮಾಡುತ್ತಾರೆ. ಆದರೆ ಪೌರಕಾರ್ಮಿಕರು ನಮಗೆ ಅನಾರೋಗ್ಯ ಬರದಂತೆ ನಮ್ಮ ಆರೋಗ್ಯ ಕಾಪಾಡುವಲ್ಲಿ ಮುನ್ನೆಚ್ಚರಿಕೆ ವಹಿಸಿ ಕಾಳಜಿ ವಹಿಸುತ್ತಾರೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರಿಗೂ ನಮ್ಮ ತಂದೆ-ತಾಯಿಗೆ ನೀಡುವಷ್ಟೇ ಗೌರವ ನೀಡಬೇಕು ಎಂದು ಅಭಿಪ್ರಾಯಿಸಿದರು. ಪಟ್ಟಣದಲ್ಲಿ ಕಸ ವಿಲೇವಾರಿಯ ಸಮಸ್ಯೆ ಇರುವ ನಿಟ್ಟಿನಲ್ಲಿ ಕಸ ವಿಂಗಡಣೆ ಮಾಡುವ ಬಗ್ಗೆ ನಗರಸಭೆ ಹಸಿಕಸ ಒಣಕಸ ವಿಂಗಡಣೆ ಮಾಡಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಸಾರ್ವಜನಿಕರು ಹೆಚ್ಚು ಬೆಂಬಲ ನೀಡುತ್ತಿಲ್ಲ ಎಂಬ ಆರೋಪಗಳಿವೆ. ರಸ್ತೆಬದಿಯಲ್ಲಿ ಕಸ ಹಾಕುವುದು, ಕಸದ ಜೊತೆಗೆ ಗಾಜು, ವಿಷಕಾರಿ ರಾಸಾಯನಿಕ ಅಂಶ ಇರುವ ವಸ್ತುಗಳನ್ನು ಹಾಕಿದರೆ ಅದು ಪೌರಕಾರ್ಮಿಕರ ಮೇಲೆ ಆರೋಗ್ಯದ ಪರಿಣಾಮ ಬೀರುತ್ತದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರು ಮನೆಯಲ್ಲೇ ಹಸಿ ಕಸ, ಒಣಕಸ ವಿಂಗಡಣೆ ಮಾಡಿ ನೀಡುವ ಮೂಲಕ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪೌಕರಾರ್ಮಿಕರ ಆರೋಗ್ಯದ ಬಗ್ಗೆಯೂ ನಾವು ಕಾಳಜಿ ವಹಿಸೋಣ ಎಂದು ರಮೇಶ್‌ಗೌಡ ಮನವಿ ಮಾಡಿದರು.
ಪೌರಕಾರ್ಮಿಕರಿಗೆ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳು ಕಡಿಮೆ. ಪೌರಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಬೇಕು, ಹಾಗೂ ಪಟ್ಟಣದಲ್ಲಿನ ಪೌರಕಾರ್ಮಿಕರ ಮಕ್ಕಳಿಗೆ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ೨ ಸೀಟ್ ಮೀಸಲಾತಿ ಮಾಡಿ ಉಚಿತ ಶಿಕ್ಷಣ ಕೊಡಲು ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ನಗರಸಭಾ ಆಯುಕ್ತ ಸಿ. ಪುಟ್ಟಸ್ವಾಮಿ ಅವರು ಮಾತನಾಡಿ, ನಗರದ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರಿಗೂ ತಮ್ಮದೇ ಆದ ಆತ್ಮಗೌರವ ಇರುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಆರೋಗ್ಯ ಕಾಪಾಡಲು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಶ್ರಮಿಸುವ ಪೌರಕಾರ್ಮಿಕರಿಗೆ ಸಾರ್ವಜನಿಕರು ಗೌರವ ನೀಡಿ ಅವರು ನಮ್ಮಲ್ಲಿ ಒಬ್ಬರು ಎಂಬ ಮನೋಭಾವ ಬೆಳೆಸಿಕೊಂಡರೆ ಪೌರಕಾರ್ಮಿಕರ ಶ್ರಮಕ್ಕೆ ಹೆಚ್ಚು ಗೌರವ ನೀಡಿದಂತಾಗಿ ಅವರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರನ್ನು ಅಭಿನಂದಿಸಿ ಗೌರವಿಸುತ್ತಿರುವ ಕಕಜವೇದಿಕೆ ರಮೇಶ್‌ಗೌಡರಿಗೆ ಪೌರಕಾರ್ಮಿಕರ ಪರವಾಗಿ ಅಭಿನಂದಿಸುತ್ತೇವೆ ಎಂದರು.
ನಗರಸಭಾ ಸದಸ್ಯ ವಾಸಿಲ್ ಅಲಿಖಾನ್ ಮಾತನಾಡಿ, ಪೌರಕಾರ್ಮಿಕರು ತಮ್ಮ ಕುಟುಂಬದ ಬಗ್ಗೆ ಅವರ ಆರೋಗ್ಯದ ಬಗ್ಗೆ ಯೋಚನೆ ಮಾಡದೆ ಪಟ್ಟಣದಲ್ಲಿ ಸ್ವಚ್ಚತೆಗೆ ಶ್ರಮಿಸುತ್ತಾರೆ. ಆದರೆ ಅವರಿಗೆ ಸೂಕ್ತ ಗೌರವ ಸಿಗುವುದು ಅಪರೂಪ, ನಗರಸಭಾ ಸದಸ್ಯರುಗಳಾದ ನಾವೂ ಸಹ ವಾರ್ಡ್ನಲ್ಲಿ ಕೆಲ ಒತ್ತಡಕ್ಕೆ ಸಿಲುಕಿ ಕೆಲವೊಮ್ಮೆ ಪೌಕರಾರ್ಮಿಕರ ಮೇಲೆ ರೇಗಾಡುವ ಪರಿಸ್ಥಿತಿ ಉಂಟಾಗುತ್ತದೆ. ಆದರೂ ಎಲ್ಲವನ್ನು ಸಹಿಸಿಕೊಂಡು ಸಮಾಜದ ಆರೋಗ್ಯಕ್ಕಾಗಿ ನಮ್ಮ ಪರಿಸರವನ್ನು ಸ್ವಚ್ಚತೆ ಮಾಡುವ ಪೌರಕಾರ್ಮಿಕರನ್ನು ಅಭಿನಂದಿಸುವ ರಮೇಶ್‌ಗೌಡರ ಕಾರ್ಯ ಶ್ಲಾಘನೀಯ ಎಂದರು.
ಪೌಕರಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ, ಈಶ್ವರನಿಗೆ ಸರಿಸಮನಾದ ಜಲಗಾರ ಎಂದರೆ ಅದು ಪೌಕರಾರ್ಮಿಕರು ಎಂದು ಜಗದ ಕವಿ ಕುವೆಂಪು ಅವರು ತಮ್ಮ ಜಲಗಾರ ಕಾವ್ಯದಲ್ಲಿ ಬಣ್ಣಿಸುತ್ತಾರೆ. ಆದರೆ ಅದು ಕಾವ್ಯಕ್ಕೆ ಮಾತ್ರ ಸೀಮಿತವಾಗಿದ್ದು ಸರ್ಕಾರಗಳು ಪೌರಕಾರ್ಮಿಕರಿಗೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ವಿಧಾನಸೌದದ ಎ.ಸಿ. ಕಚೇರಿಗಳಲ್ಲಿ ಕೂತು ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗಳಿಗೆ ಸರ್ಕಾರದಿಂದ ಹೆಲ್ತ್ಕಾರ್ಡ್ಗಳನ್ನು ನೀಡಿದ್ದು ಅವರಿಗೆ ನಗದು ರಹಿತ ಆರೋಗ್ಯ ಸೇವೆ ಸಿಗುತ್ತಿದೆ. ಆದರೆ ಪ್ರತಿನಿತ್ಯ ಸಮಾಜದ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ವಿಮೇ ನೀಡಲು ತಾರತಮ್ಯ ಮಾಡುತ್ತಿದ್ದು, ಜೊತೆಗೆ ಖಾಯಂ ಆಗದೆ ಬಾಕಿ ಉಳಿದಿರುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಮೀನಾಮೇಷ ಎಣಿಸುತ್ತಿದೆ. ಈ ಬಗ್ಗೆ ನಮ್ಮ ಹೋರಾಟಕ್ಕೆ ಕಕಜ ವೇದಿಕೆ ಬೆಂಬ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರುಗಳಾದ ರಂಜಿತ್ ಗೌಡ, ಬೆಂಕಿ ಶ್ರೀಧರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ರೈತ ಮಹಿಳಾ ಘಟಕದ ಅಧ್ಯಕ್ಷ ಮಂಗಳಮ್ಮ, ತಾಲ್ಲೂಕು ಮಹಿಳಾ ಗೌರವಾಧ್ಯಕ್ಷೆ ರಾಜಮ್ಮ, ಮಂಗಳವಾರಪೇಟೆ ಸತೀಶ್, ಚಿಕ್ಕೇನಹಳ್ಳಿ ಸುರೇಶ್, ಚಿನ್ಮಯ್, ಸಿದ್ದಪ್ಪಾಜಿ ಸೇರಿದಂತೆ ಸಾರ್ವಜನಿಕ ಒಕ್ಕಲಿಗರ ವಿದ್ಯಾಸಂಸ್ಥೆಯ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.