Friday, April 4, 2025
Google search engine

Homeರಾಜಕೀಯಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಡಿ : ಬಿ.ವೈ ವಿಜಯೇಂದ್ರ ಆಗ್ರಹ

ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಡಿ : ಬಿ.ವೈ ವಿಜಯೇಂದ್ರ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಹೈಕೋರ್ಟಿನ ತೀರ್ಪನ್ನು ಗೌರವಿಸಿ ಗೌರವಯುತವಾಗಿ ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅವಕಾಶ ಕೊಟ್ಟಿದ್ದ ಮಾನ್ಯ ರಾಜ್ಯಪಾಲರ ಕ್ರಮವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದ್ದಾರೆ. ಕಾನೂನಿನ ಎದುರು ಎಲ್ಲರೂ ಒಂದೇ ಎಂದು ಹೈಕೋರ್ಟ್ ತಿಳಿಸಿದೆ ಎಂದು ವಿಶ್ಲೇಷಿಸಿದರು.

ಹೈಕೋರ್ಟ್‌ನಲ್ಲಿ ಸುದೀರ್ಘ ವಾದ, ಪ್ರತಿವಾದದ ಬಳಿಕ ಈ ತೀರ್ಪು ಹೊರಬಿದ್ದಿದೆ. ಗೌರವಾನ್ವಿತ ರಾಜ್ಯಪಾಲರು ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿದ್ದರು. ಕಾಂಗ್ರೆಸ್ಸಿಗರು ಗೌರವಾನ್ವಿತ ರಾಜ್ಯಪಾಲರು, ರಾಜಭವನವನ್ನು ಕೇಂದ್ರದ ಏಜೆಂಟ್ ಎಂದು ಆಕ್ಷೇಪಿಸಿದ್ದರು ಎಂದು ಟೀಕಿಸಿದರು.

ಕಳೆದ ಕೆಲವು ತಿಂಗಳಿನಿಂದ ಬಿಜೆಪಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿದ್ದೆವು. ನಂತರ ಸ್ವತಃ ಸಿಎಂ ಕುಟುಂಬವೇ ಫಲಾನುಭವಿಗಳಾಗಿರುವ ಮೈಸೂರಿನ ಮುಡಾ ಹಗರಣ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದೆವು. ಬೆಂಗಳೂರು- ಮೈಸೂರು ಪಾದಯಾತ್ರೆಯನ್ನು ನಡೆಸಿ ಬಿಜೆಪಿ- ಜೆಡಿಎಸ್ ಒಟ್ಟಾಗಿ ಯಶಸ್ವಿ ಹೋರಾಟ ಮಾಡಿದ್ದಾಗಿ ವಿವರಿಸಿದರು. ರಾಜ್ಯದ ಮೂಲೆಮೂಲೆಯಿಂದ ಲಕ್ಷ ಲಕ್ಷ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು ಎಂದರು.

ಗೌರವಾನ್ವಿತ ರಾಜ್ಯಪಾಲರಿಗೆ ಅನೇಕ ಆರ್‍ಟಿಐ ಕಾರ್ಯಕರ್ತರು ಖಾಸಗಿ ದೂರು ನೀಡಿದ್ದರು. ಸೂಕ್ತ ತನಿಖೆ ನಡೆಸಲು ಒತ್ತಾಯಿಸಿದ್ದರು ಎಂದು ಅವರು ತಿಳಿಸಿದರು. ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು ಎಂದ ಅವರು, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಭ್ರಷ್ಟಾಚಾರದ ಕಳಂಕ ಹೊತ್ತ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ವಿಶ್ವಾಸ ಇದೆ; ಅವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಮುಡಾ ವಿಚಾರದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಳಿಕ ರಾಜಭವನ, ರಾಜ್ಯಪಾಲರ ವಿರುದ್ಧ ತೇಜೋವಧೆ ಮಾಡಿದ್ದರು. ಈಗ ಹೈಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಆದ್ದರಿಂದ ಸಿಎಂ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹವನ್ನು ಮುಂದಿಟ್ಟರು. ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ ಎಂದೂ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಪಕ್ಷದ ಮುಂದಿನ ನಡೆಯ ಕುರಿತು ಪ್ರಮುಖರು, ಹಿರಿಯರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಉತ್ತರ ನೀಡಿದರು.ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular