ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಸರಕಾರದ ಆದೇಶ, ಹಲವೆಡೆ ನಿಷೇಧಾಜ್ಞೆ, ಕೆಲವೆಡೆ ಕಟ್ಟೆಚ್ಚರ
ಬೆಂಗಳೂರು/ಹುಬ್ಬಳ್ಳಿ: ಹೊಸ ವರ್ಷಾಚರಣೆಗೆ ರಾಜ್ಯಾದ್ಯಂತ ಸಂಭ್ರಮ ಕಳೆಗಟ್ಟಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರಕಾರ ಕಟ್ಟೆಚ್ಚರ ವಹಿಸಿದೆ. ಕೆಲವು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆಯ್ದ ಸ್ಥಳಗಳಿಗೆ ನಿಷೇಧ ವಿಧಿಸಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಹದ್ದಿನ ಕಣ್ಣಿರಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿ. 31ರ ಸಂಜೆ 6ರಿಂದ ಜ. 1ರ ಬೆಳಗ್ಗೆ 6ರ ವರೆಗೆ ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಝರಿಫಾಲ್ಸ್, ಹೊನ್ನಮ್ಮನಹಳ್ಳ, ಗಾಳಿಕೆರೆ, ಹಿರೇಕೊಳಲೆ ಕೆರೆ, ಮೂಡಿಗೆರೆ ತಾಲೂಕಿನ ಎತ್ತಿನಭುಜ, ದೇವರಮನೆ, ರಾಣಿಝರಿ, ಬಲ್ಲಾಳರಾಯನ ದುರ್ಗಾ, ಬಂಡಾಜೆ ಫಾಲ್ಸ್ , ಕುಡಿಗೆ ಫಾಲ್ಸ್, ಕಳಸ ತಾಲೂಕು ಕ್ಯಾತನಮಕ್ಕಿ, ರುದ್ರಪಾದ ತೂಗು ಸೇತುವೆ, ಅಬ್ಬುಗುಡಿಗೆ ಫಾಲ್ಸ್, ಕಡೂರು ತಾಲೂಕು ಅಯ್ಯನಕೆರೆ, ಮದಗದಕೆರೆ, ತರೀಕೆರೆ ತಾಲೂಕು ಕೆಮ್ಮಣ್ಣಗುಂಡಿ, ಕಲ್ಲತ್ತಗಿರಿ, ಹೆಬ್ಬೆಫಾಲ್ಸ್ ಸೇರಿದಂತೆ 21 ತಾಣಗಳಿಗೆ ಪ್ರವೇಶ ನಿಷೇಧಿಸಿದೆ.
ಬೋಟಿಂಗ್ ನಿಷೇಧ
ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿ. 31ರಂದು ಸಂಜೆ 6 ಗಂಟೆ ಅನಂತರ ಬೀಚ್‌ಗಳಲ್ಲಿ ಬೋಟಿಂಗ್ ನಡೆಸುವಂತಿಲ್ಲ. ಬಾರ್, ರೆಸ್ಟೋರೆಂಟ್, ಹೋಂಸ್ಟೇಗಳನ್ನು ನಿಗದಿತ ಸಮಯಕ್ಕೆ ಬಂದ್ ಮಾಡಬೇಕು. ಧ್ವನಿವರ್ಧಕಗಳಿಗೆ ಕಡ್ಡಾಯವಾಗಿ ನಿಷೇಧ ಹೇರಲಾಗಿದೆ. ಸಮುದ್ರ, ಜಲಪಾತ ಹಾಗೂ ನದಿಗಳ ನೀರಿನಲ್ಲಿ ಈಜುವಂತಿಲ್ಲ. ಬೈಕ್ ವ್ಹೀಲಿಂಗ್ ಕಂಡು ಬಂದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಆಯ್ದ ಸ್ಥಳಗಳಲ್ಲಿ ಡ್ರೋನ್ ಕಣ್ಗಾವಲು ಇಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನಿಯಮ ಉಲ್ಲಂ ಸದಂತೆ ರೆಸಾರ್ಟ್ ಮಾಲಕರಿಗೆ ಸೂಚನೆ ನೀಡಲಾಗಿದೆ. ಶಿವಮೊಗ್ಗದಲ್ಲಿ ಸಂಭ್ರಮಾಚರಣೆಗೆ ಮಧ್ಯರಾತ್ರಿ 1 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಯಾದಗಿರಿಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ಮೈಸೂರಿನಲ್ಲಿ ವರ್ಷಾಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಡಿ. 31ರಂದು ರಾತ್ರಿ 7 ಗಂಟೆ ಅನಂತರ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. 2025ರ ಜ. 1ರಂದು ಬೆಳಗ್ಗೆ 6 ಗಂಟೆಗೆ ಬೆಟ್ಟಕ್ಕೆ ತೆರಳಲು ಅವಕಾಶವಿದೆ. ಡಿ. 31ರ ಬೆಳಗ್ಗೆ 8ರಿಂದ 2025ರ ಜ. 2ರ ಬೆಳಗ್ಗೆ 8ರ ವರೆಗೆ ತುಮಕೂರಿನ ಕ್ಯಾತ್ಸಂದ್ರ ಠಾಣೆ ಸರಹದ್ದು, ನಾಮದ ಚಿಲುಮೆ, ಬಸದಿ ಬೆಟ್ಟ ಹಾಗೂ ದೇವರಾಯನದುರ್ಗ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರವಾಸಿ ತಾಣ, ಭೀಮೇಶ್ವರಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶ ಹಾಗೂ ರಾಮನಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಚುಂಚಿಪಾಲ್ಸ್, ಸಂಗಮ ಮತ್ತು ಮೇಕೆದಾಟು ಪ್ರದೇಶಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
ಅತಿಥಿ ಗೃಹಗಳಲ್ಲಿ ಕೊಠಡಿ ಕಾದಿರಿಸುವಿಕೆ ರದ್ದು
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿಗಿರಿಧಾಮ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಘಟ್ಟ ದೇವಸ್ಥಾನ, ಗಂಜಾಂನ ಕಾವೇರಿ ಸಂಗಮ, ಗೋಸಾಯಿ ಘಾಟ್ ಹಾಗೂ ಕಾರೇಕುರ ಗ್ರಾಮದ ಬಳಿಯ ಕಾವೇರಿ ನದಿ ಸುತ್ತಮುತ್ತಲಿನ ಪ್ರದೇಶಗಳಿಗೆ ಡಿ. 31ರ ಸಂಜೆ 6ಗಂಟೆಯಿಂದ ಜ.1ರ ಬೆಳಗ್ಗೆ 7ರ ವರೆಗೆ ಸಾರ್ವಜನಿಕರು, ಪ್ರವಾಸಿಗರ ಪ್ರವೇಶಕ್ಕೆ ನಿಷೇಧಾಜ್ಞೆ ವಿಧಿಸಲಾಗಿದೆ. ನಂದಿಗಿರಿಧಾಮದಲ್ಲಿ ಪ್ರವಾಸಿಗರಿಗೆ ಅತಿಥಿ ಗೃಹಗಳಲ್ಲಿ ಕೊಠಡಿಗಳ ಕಾದಿರಿಸುವುದನ್ನು ರದ್ದುಗೊಳಿಸಿ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.