Saturday, April 19, 2025
Google search engine

Homeಸ್ಥಳೀಯಬರವಣಿಗೆ ಮೂಲಕವೇ ಬ್ರಿಟಿಷರಿಗೆ ತಿರುಗೇಟು

ಬರವಣಿಗೆ ಮೂಲಕವೇ ಬ್ರಿಟಿಷರಿಗೆ ತಿರುಗೇಟು

ಮೈಸೂರು: ಡಾ.ಸರ್ವಪಳ್ಳಿ ರಾಧಾಕೃಷ್ಣ ಹಾಗೂ ದೇಶದ ಶಿಕ್ಷಣ ತಜ್ಞರು ಭಾರತದ ಕುರಿತು ಕೀಳು ಮಟ್ಟದ ಅಭಿಪ್ರಾಯ ಹೊಂದಿದ್ದ ಬ್ರಿಟಿಷರಿಗೆ ತಕ್ಕ ತಿರುಗೇಟು ನೀಡಿದ್ದರು ಎಂದು ಪ್ರೊ.ಮುಜಾಫರ್ ಅಸ್ಸಾದಿ ಪ್ರತಿಪಾದಿಸಿದರು.

ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಬಗ್ಗೆ ಬ್ರಿಟಿಷರು ಹೊಂದಿದ್ದ ಕೀಳು ಮಟ್ಟದ ಅಭಿಪ್ರಾಯಗಳಿಗೆ ದೇಶದ ಶಿಕ್ಷಣ ತಜ್ಞರು ತಮ್ಮ ಬರಹದ ಮೂಲಕ ತಿರುಗೇಟು ನೀಡಿದ್ದರು. ಡಾ.ಸರ್ವಪಳ್ಳಿ ರಾಧಾಕೃಷ್ಣ ಅವರೂ ಹಿಂದುತ್ವದ ವಿಚಾರವಾಗಿ ಬ್ರಿಟಿಷರಿಗೆ ತಿರುಗೇಟು ನೀಡಿದ್ದರು ಎಂದು ತಿಳಿಸಿದರು.

ರಾಧಾಕೃಷ್ಣ ಅವರು ರಾಷ್ಟ್ರೀಯತೆಯ ವಿಚಾರವಾಗಿ ಕಾರ್ಯ ನಿರ್ವಹಿಸಿಲ್ಲ ಹೀಗಾಗಿ ಪ್ರಧಾನಿ ಹುದ್ದೆ ತಪ್ಪಿತ್ತು ಎಂಬ ವಾದವಿದೆ. ಆದರೆ, ಅವರ ಬರವಣಿಗೆಗಳು ಧಾರ್ಮಿಕವಾಗಿ ದೇಶದ ಶ್ರೇಷ್ಠತೆ ಏನು ಎಂಬುದನ್ನು ತೋರಿಸಿಕೊಟ್ಟಿತ್ತು. ಅವರು ಬರವಣಿಗೆಯ ಮೂಲಕ ರಾಷ್ಟ್ರೀಯತೆಯ ಕೆಲಸ ಮಾಡಿದ್ದರು ಎಂದರು. ಶಿಕ್ಷಕರು ಪ್ರತಿ ಬಾರಿಯೂ ಯಾವುದೇ ಕಾರ್ಯದ ಪ್ರಮುಖ ಸ್ಥಾನ ಪಡೆದರೂ, ಕಥಾನಕದ ಮುಖ್ಯ ಪಾತ್ರವಾಗಿರುವುದಿಲ್ಲ. ರಾಧಾಕೃಷ್ಣರೂ ಅದೇ ಪರಿಸ್ಥಿತಿಯಲ್ಲಿ ಉಳಿದರು. ಬ್ರಿಟಿಷರು ಇಂಗ್ಲೀಷ್ ಶಿಕ್ಷಣ, ಭಾರತೀಯ ಕೃತಿಗಳ ಭಾಷಾಂತರ ಹಾಗೂ ದಾಖಲೀಕರಣ ಮಾಡಿ ದೇಶದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದರು. ಭಾರತದ ನ್ಯೂನತೆಗಳ ಬಗ್ಗೆ ಉತ್ಪ್ರೇಕ್ಷೆ ಮಾಡುತ್ತಿದ್ದಾಗ ದೇಶದಲ್ಲಿ ಇತಿಹಾಸ ಪರಿಶೀಲಿಸುವ ಕಾರ್ಯ ಆರಂಭವಾಯಿತು ಎಂದು ತಿಳಿಸಿದರು.
ಮ್ಯಾಕ್ಸ್ ಮುಲ್ಲರ್ ಧರ್ಮದ ಬಗ್ಗೆ ಟಿಪ್ಪಣಿ ಬರೆದು, ಅವನ್ನು ಒಂದು ಕರ್ತವ್ಯಕ್ಕಷ್ಟೇ ಸೀಮಿತಗೊಳಿಸಿದ್ದ. ಆದರೆ, ರಾಧಾಕೃಷ್ಣ ಹಾಗೂ ಪಿ.ಬಿ ಖಾನೆ ಮುಂತಾದವರು ಧರ್ಮಶಾಸ್ತ್ರದ ಬಗ್ಗೆ ಅದು ಸಾಮಾಜಿಕ ಅಭ್ಯಾಸ ಹಾಗೂ ಮೌಲ್ಯಯುತವಾದದ್ದು ಎಂದು ಬಣ್ಣಿಸುತ್ತಾರೆ. ದೇಶಿಯ ಸಂಸ್ಕೃತಿಯ ಬಗ್ಗೆ ಒಲವು ಮೂಡಿಸಲು ಅಂದಿನ ಬರಹಗಳು ಕಾರಣವಾದವು ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯ ವಿವಿಧ ಕಾಲಘಟ್ಟದಲ್ಲಿ ಭಿನ್ನ ಕಾರ್ಯ ನಿರ್ವಹಿಸಿವೆ. ಪ್ರಸ್ತುತ ಅವನ್ನು ಜನರಿಗೆ ತಿಳಿಸುವ ಕಾರ್ಯವಾಗಬೇಕಿದೆ. ಇಲ್ಲಿ ಉಪನ್ಯಾಸಕರಾಗಿದ್ದ ಕುವೆಂಪು ಬರೆದ ಮಲೆಗಳಲ್ಲಿ ಮದುಮಗಳು, ಅನಂತಮೂರ್ತಿ ಬರೆದ ಸಂಸ್ಕಾರ ಪುಸ್ತಕಗಳು ನೊಬೆಲ್ ಪುರಸ್ಕಾರ ಪಡೆಯುವ ಸಾಮರ್ಥ್ಯದ್ದಾಗಿತ್ತು. ಕೌಟಿಲ್ಯನ ಅರ್ಥಶಾಸ್ತ್ರ ದೊರೆತಿದ್ದೂ ಇಲ್ಲೇ. ಈ ರೀತಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ವಿಶ್ವವಿದ್ಯಾಲಯದ ಕೊಡುಗೆ ಅಪಾರ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಕುಲಸಚಿವೆ ವಿ.ಆರ್.ಶೈಲಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹಾದೇವನ್ ಇದ್ದರು.

RELATED ARTICLES
- Advertisment -
Google search engine

Most Popular