ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಾನು ಕಾನೂನುಬಾಹಿರ ವ್ಯವಹಾರ ಮಾಡಿದ್ದರೆ ಸಾಬೀತು ಮಾಡಿ, ನಾನು ರಾಜಕೀಯ ಜೀವನದಿಂದಲೇ ನಿವೃತ್ತಿಯಾಗುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನೊಬ್ಬ ಜನಪ್ರತಿನಿಧಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಜನಪ್ರತಿನಿಧಿಗಳು ನನ್ನನ್ನು ಆಯ್ಕೆ ಮಾಡಿದ್ದಾರೆ. ಅಡಗೂರು ವಿಶ್ವನಾಥರವರಂತೆ ನಾಮನಿರ್ದೇಶಿತ ಸದಸ್ಯನಲ್ಲ. ನಾನು ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯನಾಗಿ ಮೈಸೂರು ಎ.ಪಿ.ಎಂ.ಸಿ. ಅಧ್ಯಕ್ಷನಾಗಿ ಕಳೆದ ೩೫ ವರ್ಷಗಳಿಂದ ಸಾರ್ವಜನಿಕ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಸಹಜವಾಗಿಯೇ ಜನರು ಅವರ ಸಮಸ್ಯೆಗಳ ಪರಿಹಾರಕ್ಕೆ ನನ್ನ ಬಳಿ ಬರುತ್ತಾರೆ. ಅವರ ಕೆಲಸ ಮಾಡಿಕೊಡಬೇಕಾಗುತ್ತದೆ. ಎಂ.ಡಿ.ಎ. ಸೇರಿದಂತೆ ಎಲ್ಲಾ ಕಛೇರಿಗಳಿಗೂ ನಾನು ಹೋಗುತ್ತೇನೆ. ಎಂ.ಎಲ್ಸಿ. ವಿಶ್ವನಾಥರವರು ನನ್ನನ್ನು ಎಂ.ಡಿ.ಎ. ಅಟೆಂಡರ್ ಎಂದಿದ್ದಾರೆ,
ಆದರೆ ಪ್ರಾಧಿಕಾರದ ಅಧಿನಿಯಮದ ಪ್ರಕಾರ ಪ್ರಾಧಿಕಾರದ ಪ್ರತಿಯೊಬ್ಬ ಸದಸ್ಯನು ಹಾಗೂ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರಿಗೂ ಸಹ ಭಾರತೀಯ ದಂಡ ಸಂಹಿತೆಯ ಪ್ರಕರಣ ೨೧ರ ಅರ್ಥವ್ಯಾಪ್ತಿಯಲ್ಲಿ ಸಾರ್ವಜನಿಕರ ಸೇವಕನೇ ಆಗಿದ್ದೇನೆ ಎಂಬುದನ್ನು ತಿಳಿದುಕೊಳ್ಳಬೇಕು. ಅಡಗೂರು ವಿಶ್ವನಾಥರವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಏಕೆಂದರೆ ಅಮೇರಿಕಾ ಅಧ್ಯಕ್ಷರಿಂದ ಪ್ರಾರಂಭವಾಗಿ ಪ್ರಧಾನಿ ನರೇಂದ್ರ ಮೋದಿ, ಹೆಚ್.ಡಿ. ದೇವೇಗೌಡರು, ಸಿದ್ದರಾಮಯ್ಯನವರು, ಯಡಿಯೂರಪ್ಪ ಎಲ್ಲರ ಬಗ್ಗೆಯೂ ಟೀಕೆ ಮಾಡುತ್ತಾರೆ. ಅದು ಅವರಿಗಿರುವ ಪ್ರಚಾರದ ಗೀಳು ಎಂದ ಅವರು ಎಂ.ಡಿ.ಎ. ಗೆ ನೀವು ಬರುತ್ತೀರಿ. ನಿಮ್ಮ ಮಗನೂ ಬರುತ್ತಾರೆ. ಕಳೆದ ೧೫ ದಿನದಲ್ಲಿ ಶಾಸಕರ ಭವನದಲ್ಲಿ ನನ್ನನ್ನು ಕರೆದು ಏನು ಮಾತನಾಡಿದ್ದೀರಿ ಸ್ವಾಮಿ ಅದನ್ನು ತಿಳಿಸಿ ಎಂದರು.
ಕೌಟಿಲ್ಯ ರಘುರವರು ಎಂ.ಡಿ.ಎ. ಹಗರಣವನ್ನು ಸಿ.ಬಿ.ಐ.ಗೆ ವಹಿಸಬೇಕು ಭಾರೀ ಅವ್ಯವಹಾರವಾಗಿದೆ ಎಂದಿದ್ದಾರೆ. ಆದರೆ ಇದೇ ಕೌಟಿಲ್ಯ ರಘುರವರು ಬೋಗಾದಿಯಲ್ಲಿ ೨೭-೦೪-೨೦೧೭ರಂದು ಅವರದೇ ಆದ
ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್‌ಗೆ ಹೆಣ್ಣು ಮಕ್ಕಳ ವಸತಿ ಶಾಲೆ ಉದ್ದೇಶಕ್ಕೆ ೧೨೦೨ ಚ.ಮೀ. ಅಳತೆಯ ಸಿ.ಎ. ನಿವೇಶನ ಪಡೆದು ನಿಗದಿತ ಉದ್ದೇಶಕ್ಕೆ ಬಳಸದೇ ರಾಜಕೀಯ ಪ್ರಭಾವಬೀರಿ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಕನಕದಾಸನಗರದಲ್ಲಿ ಪಶು ಆಸ್ಪತ್ರೆಗೆ ಮೀಸಲಿಟ್ಟು ೧ ಎಕರೆ ಜಾಗ (೪೩೫೬೦ ಚ.ಅ.) ವನ್ನು ಬದಲಿ ನಿವೇಶನವಾಗಿ ಪಡೆದು ಹೆಚ್ಚುವರಿ ಹಣವನ್ನು ಕಟ್ಟದೆ ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಇವರ ನಿವೇಶನವನ್ನು ಪ್ರಾಧಿಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದ ಅವರು ನಾನೊಬ್ಬ ಮಾಜಿ ಸೈನಿಕ. ನಾನು ಗಾಳಿಯಲ್ಲಿ ಗುಂಡು ಹೊಡೆಯುವವನಲ್ಲ.
ಕಳೆದ ೧೫ ವರ್ಷಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾಗಿದೆ. ೫೦/೫೦ ಅನುಪಾತದಲ್ಲಿ ರೈತರಿಗೆ ನಿವೇಶನ ನೀಡಿಲ್ಲ. ಇದನ್ನು ದಾಖಲೆ ಸಮೇತ ಸದನದಲ್ಲಿ ಚರ್ಚೆ ಮಾಡಿ ಸರ್ಕಾರದ ಗಮನ ಸೆಳೆದು ರೈತರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನ ಮಾಡುತ್ತೇನೆ. ನನ್ನ ಮೇಲೆ ಆರೋಪ ಮಾಡುವವರು ಸಮಯ ನಿಗದಿ ಮಾಡಿ ಬಹಿರಂಗ ಚರ್ಚೆಗೆ ಬನ್ನಿರಿ ಎಂದು ಮಂಜೇಗೌಡ ಸವಾಲು ಹಾಕಿದ್ದಾರೆ.