ಯಳಂದೂರು: ತಾಲೂಕು ಪಂಚಾಯಿತಿಗೆ ೨೦೨೩-೨೪ ನೇ ಸಾಲಿನಲ್ಲಿ ಬಂದಿದ್ದ ಅನಿರ್ಬಂಧಿತ ಅನುದಾನದ ಹಣ ಖರ್ಚು ಮಾಡದೆ ವಾಪಸ್ಸು ಹೋಗುವಂತೆ ಮಾಡಿರುವ ಯಳಂದೂರು ತಾಲೂಕು ಪಂಚಾಯತ್ ರಾಜ್ ಇಲಾಖೆಯ ಎಇಇ ಮತ್ತು ಜೆಇ ವಿರುದ್ಧ ಕ್ರಮ ವಹಿಸುವಂತೆ ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗುತ್ತಿಗೆದಾರರ ಸಂಘದ ಸದಸ್ಯರು ಗುರುವಾರ ದೂರು ಸಲ್ಲಿಸಿದರು.
ಈ ಸಾಲಿನಲ್ಲಿ ತಾಪಂಗೆ ೧.೧೨ ಕೋಟಿ ರೂ. ಅನಿರ್ಬಂಧಿತ ಅನುದಾನ ಬಿಡುಗಡೆಯಾಗಿತ್ತು. ಪರಿಶಿಷ್ಟ ಜಾತಿ, ವರ್ಗದವರೇ ಹೆಚ್ಚಿರುವ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಣ ಬಳಕೆ ಮಾಡಿಕೊಳ್ಳಲು ಒಟ್ಟು ೭೬ ಕಾಮಗಾರಿಗಳಿಗೆ ಕ್ರಿಯಾಯೋಜನೆಯನ್ನು ರೂಪಿಸಲಾಗಿತ್ತು. ಇದರಲ್ಲಿ ಕೆಲವು ಕಾಮಗಾರಿಗಳನ್ನಷ್ಟೆ ಮಾಡಲಾಗಿದ್ದು ಇದು ಕಳಪೆ ಗುಣಮಟ್ಟದಿಂದ ಕೂಡಿದೆ. ಇಂತಹ ಗುತ್ತಿಗೆದಾರರ ಜೊತೆ ಪಂಚಾಯತ್ ರಾಜ್ ಎಇಇ ಇಮ್ಯಾನುಯಲ್ ಸಂತೋಷ್‌ಕುಮಾರ್, ಜೆಇ ಮಂಜು ಶಾಮೀಲಾಗಿದ್ದಾರೆ. ಕೇವಲ ೩ ಜನ ಗುತ್ತಿಗೆದಾರರಿಗೆ ಮಾತ್ರ ಈ ಕೆಲಸವನ್ನು ನೀಡಲಾಗಿದೆ. ಸ್ಥಳ ಪರಿಶೀಲನೆ ಮಾಡದೆ, ಅಳತೆ ಪುಸ್ತಕದಲ್ಲಿ ನಮೂದಿಸದೆ, ಕುಡಿಯುವ ನೀರು ವಿಭಾಗದ ಕಂಪ್ಯೂಟರ್ ಆಪರೇಟರ್ ಮೂಲಕ ಅಳತೆ ಪುಸ್ತಕದಲ್ಲಿ ನಮೂದಿಸಿ ಬಿಲ್ ಪಾವತಿ ಮಾಡಿದ್ದಾರೆ. ಕೇವಲ ೩೩ ಲಕ್ಷ ರೂ. ಕಾಮಗಾರಿಯನ್ನು ಮಾಡಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಆದರೆ ವಾಸ್ತವಾಗಿ ೧.೧೨ ಕೋಟಿ ರೂ. ಅನುದಾನದಲ್ಲಿ ಕೇವಲ ೧೮ ಲಕ್ಷ ರೂ. ಮಾತ್ರ ಖರ್ಚಾಗಿದ್ದು ಉಳಿದ ೯೪ ಲಕ್ಷ ರೂ. ಸರ್ಕಾರಕ್ಕೆ ವಾಪಸ್ಸಾಗಿದೆ. ಹಾಗಾಗಿ ಇವರ ನಿರ್ಲಕ್ಷ್ಯದಿಂದ ಅನುದಾನ ವಾಪಸ್ಸಾಗಿದೆ, ಜೊತೆಗೆ ಕಳಪೆ ಕಾಮಗಾರಿಗಳಿಗೆ ಬಿಲ್ ಮಾಡಲಾಗಿದೆ. ಹಾಗಾಗಿ ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ವಹಿಸಬೇಕು, ಇಲ್ಲವಾದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಇವರು ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾರವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಇವರು ಈ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸುವ ಭರವಸೆ ನೀಡಿದ್ದಾರೆ.
ಕರವೇ ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಜಿಪಂ ಮಾಜಿ ಸದಸ್ಯ ಜೆ. ಯೋಗೇಶ್, ಗುತ್ತಿಗೆದಾರರಾದ ಕೊಮರನಪುರ ಪುಟ್ಟರಾಜು, ಮಾಂಬಳ್ಳಿ ಶಿವಕುಮಾರ್, ರಂಗರಾಮು, ಮಹದೇವು, ನಟರಾಜು, ಮದ್ದೂರು ಚಕ್ರವರ್ತಿ ಸೇರಿದಂತೆ ಇತರರು ಇದ್ದರು.