- ಶಂಶೀರ್ ಬುಡೋಳಿ, ರಾಜ್ಯಧರ್ಮ ನ್ಯೂಸ್, ಮಂಗಳೂರು
ಮಂಗಳೂರು (ದಕ್ಷಿಣ ಕನ್ನಡ): ನಾಪತ್ತೆಯಾಗಿದ್ದ ತಾಯಿಯನ್ನು ಮತ್ತೆ ನೋಡುತ್ತೇವೆಂಬ ಭರವಸೆಯನ್ನೇ ಕಳೆದುಕೊಂಡಿದ್ದರು ಆ ಮಕ್ಕಳು. ಆದ್ರೆ ವಿಧಿಲೀಲೆ ಬೇರೆಯೇ ಇತ್ತು. ಒಂದು ಸಣ್ಣ ಕ್ಲೂ ದೂರಾದ ತಾಯಿ-ಮಕ್ಕಳನ್ನು 5ವರ್ಷಗಳ ಬಳಿಕ ಒಂದು ಮಾಡಿಯೇ ಬಿಟ್ಟಿದೆ. ಮಕ್ಕಳಿಗೆ ತಾಯಿ ಸಿಕ್ಕ ಸಂತೋಷ ಒಂದೆಡೆಯಾದರೆ, ಉಮ್ಮಳಿಸಿ ಬರುತ್ತಿದ್ದ ಕಣ್ಣೀರು ಇನ್ನೊಂದೆಡೆ. ಈ ದೃಶ್ಯಕ್ಕೆ ಸಾಕ್ಷಿಯಾದದ್ದು ಮಂಗಳೂರಿನ ವೈಟ್‌ಡೌಸ್ ಸಂಸ್ಥೆ.
ಹೌದು… ಅಸ್ಮಾ ಎಂಬ ಈ ಮಹಿಳೆ 2019ರ ಜೂನ್ 9ರ ನಡುರಾತ್ರಿ ಮಂಗಳೂರಿನ ಪಣಂಬೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವೈಟ್‌ಡೌಸ್ ಸಂಸ್ಥೆಯ ಸಂಸ್ಥಾಪಕಿ ಕೊರಿನ್ ರಸ್ಕಿನಾರಿಗೆ ಸಿಕ್ಕಿದವಳು. ಮಾನಸಿಕ ಸ್ಥಿಮಿತ ಕಳೆದುಕೊಂಡ ಅಸ್ಮಾ ಅದು ಹೇಗೋ ಮಹಾರಾಷ್ಟ್ರದಿಂದ ಮಂಗಳೂರಿಗೆ ಬಂದಿದ್ದಳು. ಹೀಗೇ ಬಿಟ್ಟರೆ ಬೀದಿ ಕಾಮುಕರ ಕೈಗೆ ಸಿಕ್ಕರೆ ಖಂಡಿತಾ ನಲುಗಿ ಹೋಗುತ್ತಾಳೆಂದು ಕೊರಿನ್ ರಸ್ಕಿನಾ ಆಕೆಯನ್ನು ರಕ್ಷಿಸಿ ನಿರ್ಗತಿಕರ ಆಶ್ರಯತಾಣ ವೈಟ್‌ಡೌಸ್‌ಗೆ ಕರೆತರುತ್ತಾರೆ. ಬಳಿಕ ಅಸ್ಮಾ ನೀಡಿರುವ ವಿಳಾಸವನ್ನು ಇಟ್ಟುಕೊಂಡು ಆಕೆಯ ಮನೆಯವರನ್ನು ಪತ್ತೆಹಚ್ಚಲು ಮುಂದಾದರೂ ಪ್ರತಿಫಲ ಸಿಕ್ಕಿರಲಿಲ್ಲ.
ಇತ್ತೀಚೆಗೆ ಮುಂಬೈನ ಬೈಕಲಾದ ತವರುಮನೆಯ ವಿಳಾಸ ಕೊಡುತ್ತಾಳೆ ಅಸ್ಮಾ. ಆ ವಿಳಾಸದ ಜಾಡು ಹಿಡಿದು ಬೈಕಲಾ ಪೊಲೀಸ್ ಠಾಣೆಗೆ ಸಂಪರ್ಕಿಸಿದ ವೈಟ್‌ಡೌಸ್ ಸಂಸ್ಥೆಗೆ ಅಸ್ಮಾ ಮನೆಯವರು ಸಂಪರ್ಕಕ್ಕೆ ಸಿಗುತ್ತಾರೆ. ತಕ್ಷಣ ಫ್ಲೈಟ್ ಹತ್ತಿ ಬಂದ ಅಸ್ಮಾ ಮನೆಯವರು ಆಕೆಯನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.
ಶೋಹೆಬ್- ಅಸ್ಮಾ ಸಹೋದರ
ಅಸ್ಮಾ ಹತ್ತಾರು ವರ್ಷಗಳ ಕಾಲ ಪತಿಯೊಂದಿಗೆ ವಿದೇಶದಲ್ಲಿದ್ದವಳು. ಬಳಿಕ ಮುಂಬೈನ ಥಾಣೆಯ ಮಂಬ್ರಿಲ್‌ನ ಪತಿ ಮನೆಯಲ್ಲಿದ್ದಳು. ಈ ನಡುವೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಅಸ್ಮಾ ಪತಿ ಮನೆಯಿಂದ ತಾಯಿಮನೆ ನಡುವೆ ರೈಲಿನಲ್ಲಿ ಓಡಾಟ ಮಾಡುತ್ತಿದ್ದವಳು 2019ರ ಮೇಯಲ್ಲಿ ಅದು ಹೇಗೋ ಮನೆಯಿಂದ ನಾಪತ್ತೆಯಾಗಿದ್ದಾಳೆ. ಇದೀಗ 5ವರ್ಷಗಳ ಬಳಿಕ ಅಸ್ಮಾ ಮನೆಗೆ ಹೋಗಿದ್ದಾಳೆ. ಇನ್ನಾದರೂ ಆಕೆಯ ಬಾಳು ಹಸನಾಗಲಿ ಎಂಬುದೇ ನಮ್ಮ ಆಶಯ.
- ಕೊರಿನ್ ರಸ್ಕಿನಾ- ವೈಟ್‌ಡೌಸ್ ಸಂಸ್ಥೆಯ ಸಂಸ್ಥಾಪಕಿ
