ಮಂಡ್ಯ: ಶಾಸಕ ಎಚ್.ಡಿ. ರೇವಣ್ಣ ಅವರ ವರ್ತನೆ ಮೊದಲಿನಿಂದಲೂ ಸರಿ ಇರಲಿಲ್ಲ. 20 ವರ್ಷಗಳ ಹಿಂದೆ ನಾನು ಅವರೊಂದಿಗೆ ಲಂಡನ್‌ಗೆ ತೆರಳಿದ್ದಾಗ ಅಲ್ಲಿ ಕೆಟ್ಟ ನಡವಳಿಕೆ ತೋರಿಸಿ ತಗಲಾಕಿಕೊಂಡಿದ್ದರು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು.
‘ನಮ್ಮಂಥವರನ್ನು ತುಳಿದ ಪಾಪದಿಂದ ದೇವೇಗೌಡರಿಗೆ ಇಂದು ಇಂತಹ ಪರಿಸ್ಥಿತಿ ಬಂದಿದೆ. ಕಂಚನಹಳ್ಳಿ ಗಂಗಾಧರ ಮೂರ್ತಿ ಕೊಲೆ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲದಿದ್ದರೂ ಆಗ ದೇವೇಗೌಡರು ನನ್ನ ವಿರುದ್ಧ ಹೋರಾಡಿದ್ದರು. ಗಂಗಾಧರಮೂರ್ತಿ ಫೋಟೊ ಹೊತ್ತು 8 ಕಿ.ಮೀ ಪಾದಯಾತ್ರೆ ಮಾಡಿದ್ದರು. ಆಗ ನಾನು ಎಷ್ಟು ನೋವು ಅನುಭವಿಸಿದ್ದೆ ಗೊತ್ತಿದೆಯಾ’ ಎಂದು ಪ್ರಶ್ನಿಸಿದರು.
‘ಪ್ರಜ್ವಲ್ ರೇವಣ್ಣ ಇಷ್ಟೊಂದು ದೌರ್ಜನ್ಯ ನಡೆಸುತ್ತಿದ್ದರೂ ಅವರ ಅಪ್ಪ– ಅಮ್ಮ ಕತ್ತೆ ಕಾಯುತ್ತಿದ್ದರಾ? ಮಗನಿಗೆ ಆಗಲೇ ಬುದ್ಧಿ ಕಲಿಸಬೇಕಾಗಿತ್ತು. ಎಚ್.ಡಿ. ರೇವಣ್ಣ ಅವರ ನಡೆತೆಯೂ ಸರಿ ಇಲ್ಲ, ಹೀಗಾಗಿ ಮಗನ ತಪ್ಪುಗಳನ್ನು ಮುಚ್ಚಿಟ್ಟುಕೊಂಡಿದ್ದಾರೆ. ಗೂಗಲ್‌ನಲ್ಲಿ ಪಿ ಎಂದು ಟೈಪ್ ಮಾಡಿದರೆ ಪ್ರಜ್ವಲ್ ಹೆಸರು ಬರುತ್ತದೆ. ಇಂತಹ ದೊಡ್ಡ ಲೈಂಗಿಕ ಹಗರಣ ಬೇರೆಲ್ಲೂ ನಡೆದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬ್ಲೂ ಫಿಲಂ ಮಾಡುವವರ ಬಳಿಯೂ ಇಷ್ಟೊಂದು ವಿಡಿಯೊಗಳು ಇರುವುದಿಲ್ಲ. ಎಂಪಿಯಾಗಿ ಆತ ಐದು ವರ್ಷ ಬರೀ ಇದನ್ನೇ ಮಾಡಿದ್ದಾನೆ, ಬೇರೆ ಯಾವ ಕೆಲಸವನ್ನೂ ಮಾಡಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಈಗ ಸಂತ್ರಸ್ತೆಯರ ಪರ ಹೋರಾಡಬೇಕು. ಬೆಂಗಳೂರಿನಿಂದ ಹಾಸನದವರೆಗೂ ಪಾದಯಾತ್ರೆ ನಡೆಸಬೇಕು. ಪ್ರಜ್ವಲ್ ಗೆದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಫಲಿತಾಂಶಕ್ಕೆ ತಡೆ ನೀಡಬೇಕು’ ಎಂದು ಆಗ್ರಹಿಸಿದರು.